
ಬಾಂಗ್ಲಾದೇಶ ಆಟಗಾರರು ಮಾಡಿದ ಎಡವಟ್ಟಿನಿಂದಾಗಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಯಂಗ್ ವಿಲ್ ಒಂದೇ ಎಸೆತದಲ್ಲಿ ಏಳು ರನ್ ಕಲೆಹಾಕಿದ ಘಟನೆ ಉಭಯ ತಂಡಗಳ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಡೆದಿದೆ.
ಕ್ರೈಸ್ಟ್ ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಬಾಂಗ್ಲಾ-ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಲ್ ಯಂಗ್‌ಗೆ ಜೀವದಾನ ನೀಡಿದ ಬಾಂಗ್ಲಾ ಆಟಗಾರರು ನಗೆಪಾಟಲಿಗೆ ಈಡಾಗಿದ್ದಾರೆ.
ಎಬಾಡೋಟ್ ಹುಸೇನ್ ಬೌಲಿಂಗ್‌ನಲ್ಲಿ 26 ರನ್‌ಗಳಿಸಿದ್ದ ವಿಲ್ ಯಂಗ್ ಸ್ಲಿಪ್‌ಗೆ ಕ್ಯಾಚ್ ನೀಡಿದಾಗ ಬಾಂಗ್ಲಾ ಸ್ಲಿಪ್ ಫೀಲ್ಡರ್ಸ್ ಕ್ಯಾಚ್ ಕೈ ಚೆಲ್ಲಿದ ಪರಿಣಾಮ ಚೆಂಡು ಬೌಂಡರಿಯತ್ತ ಸಾಗಿತು. ಕೊನೆಗೆ ಬೌಂಡರಿ ಬಳಿ ತಡೆದ ಫೀಲ್ಡರ್ ಅದನ್ನು ವಿಕೆಟ್ ಕೀಪರ್ ನುರುಲ್ ಹಸನ್ ನತ್ತ ಎಸೆದರು. ಅಷ್ಟೊತ್ತಿಗಾಗಲೇ ಟಾಮ್ ಲಥಾಮ್ ಮತ್ತು ವಿಲ್ ಯಂಗ್ 3 ರನ್ ಕಲೆಹಾಕಿದ್ದರು.
ಆದ್ರೆ ಚೆಂಡು ಹಿಡಿದ ಬಾಂಗ್ಲಾ ವಿಕೆಟ್ ಕೀಪರ್ ಮತ್ತೊಂದು ಬದಿಗೆ ರನೌಟ್ ಮಾಡಲು ಚೆಂಡನ್ನ ಓವರ್ ಥ್ರೋ ಮಾಡಿದ ಪರಿಣಾಮ ಚೆಂಡು ಮತ್ತೆ ಬೌಂಡರಿ ಲೈನ್ ಮುಟ್ಟಿತು. ಬೌಲರ್ ಎಬಾಡೋಟ್ ಹುಸೇನ್ ಸ್ವತಃ ಓಡಿಹೋಗಿ ಬೌಂಡರಿ ತಡೆಯಲು ಪ್ರಯತ್ನಿಸಿ ವಿಫಲಗೊಂಡ್ರು. ಪರಿಣಾಮ ಕೇವಲ ಒಂದು ಎಸೆತಗಳಲ್ಲಿ ಬಾಂಗ್ಲಾ 7 ರನ್ ಬಿಟ್ಟುಕೊಟ್ಟಿತು. ಈ ಕುರಿತಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಂಗ್ಲಾ ನಗೆಪಾಟಲಿಗೆ ಗುರಿಯಾಗಿದೆ.
ಈ ಘಟನೆ ಊಟದ ವಿರಾಮದ ನಂತರ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ನಡೆದಿದೆ. ಬಾಂಗ್ಲಾದೇಶದ ಆಟಗಾರರು ಮಾಡಿದ ಎಡವಟ್ಟಿಗೆ ಎದುರಾಳಿಗೆ ಒಂದೇ ಎಸೆತದಲ್ಲಿ ಏಳು ರನ್ ನೀಡಿದ್ದಾರೆ. ಕೊನೆಗೆ 26 ರನ್‌ಗಳಿಸಿ ಜೀವದಾನ ಪಡೆದ, ವಿಲ್ ಯಂಗ್ 54 ರನ್‌ಗಳಿಸಿ ಶೊರಿಫುಲ್ ಇಸ್ಲಾಮ್‌ಗೆ ವಿಕೆಟ್ ಒಪ್ಪಿಸಿದ್ದಾರೆ.
ಮೊದಲ ದಿನದಾಟದಂತ್ಯಕ್ಕೆ ನ್ಯೂಜಿಲೆಂಡ್ ಬೃಹತ್ ಮೊತ್ತದತ್ತ ಹೆಜ್ಜೆಹಾಕಿದ್ದು, ಕೇವಲ 1 ವಿಕೆಟ್ ನಷ್ಟಕ್ಕೆ 349 ರನ್ ಸಿಡಿಸಿದೆ. ನಾಯಕ ಟಾಮ್ ಲಥಾಮ್ 278 ಎಸೆತಗಳಲ್ಲಿ ಅಜೇಯ 186 ರನ್ ಕಲೆಹಾಕಿದ್ದಾರೆ. ಇವರ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 28 ಬೌಂಡರಿಗಳಿವೆ. ಇನ್ನು ಲಥಾಮ್‌ಗೆ ಉತ್ತಮ ಸಾಥ್ ನೀಡಿದ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಡಿವೊನ್ ಕನ್ವೇ 148 ಎಸೆತಗಳಲ್ಲಿ ಅಜೇಯ 99 ರನ್ ಕಲೆಹಾಕಿ ಶತಕದ ಬಳಿ ಸಮೀಪಿಸಿದ್ದಾರೆ.
ಕಿವೀಸ್ ಕ್ಯಾಪ್ಟನ್ ಟಾಮ್ ಲಥಾಮ್ ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಶತಕವನ್ನು ದಾಖಲಿಸಿದ್ರೆ, ಡಿವೊನ್ ಕನ್ವೇ ತಮ್ಮ ಮೂರನೇ ಟೆಸ್ಟ್ ಶತಕ ದಾಖಲಿಸಲು ಇನ್ನೊಂದೇ ಹೆಜ್ಜೆ ಬಾಕಿ ಇದೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದು 1-0 ಮುನ್ನಡೆ ಸಾಧಿಸಿದೆ. ಸರಣಿಯಲ್ಲಿ ಸಮಬಲ ಸಾಧಿಸಲು ನ್ಯೂಜಿಲೆಂಡ್ ಈ ಪಂದ್ಯವನ್ನ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.