ವಿಶ್ವಕಪ್‌ಗೆ ಆತ್ಮವಿಶ್ವಾಸದ ಹೆಜ್ಜೆಯಿಟ್ಟ ಪಾಕ್: ನ್ಯೂಜಿಲೆಂಡ್ ಮಣಿಸಿ ತ್ರಿಕೋನ ಸರಣಿ ವಶಕ್ಕೆ ಪಡೆದ ಬಾಬರ್ ಪಡೆ

ನ್ಯೂಜಿಲೆಂಡ್‌ನಲ್ಲಿ ನಡೆದ ತ್ರಿಕೋನ ಸರಣಿಯನ್ನು ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭರ್ಜರಿಯಾಗಿ ಸಿದ್ಧತೆ ಮಾಡಿಕೊಂಡಿದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡ ಸರಣಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.
ಮೊದಲಿಗೆ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 164 ರನ್‌ಗಳ ಗುರಿಯನ್ನು ಪಾಕಿಸ್ತಾನ ತಂಡಕ್ಕೆ ನಿಗದಿಪಡಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಮೊಹಮ್ಮದ್ ನವಾಜ್, ಹೈದರ್ ಅಲಿ ಹಾಗೂ ಇಫ್ತಿಕಾರ್ ಅಹ್ಮದ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಮಿಂಚಿದ್ದಾರೆ. ಈ ಮೂಲಕ 5 ವಿಕೆಟ್‌ಗಳ ಅಂತರದಿಂದ ಪಾಕಿಸ್ತಾನ ಈ ಪಂದ್ಯವನ್ನು ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಪಾಕಿಸ್ತಾನ ತಂಡ ತ್ರಿಕೋನ ಸರಣಿಯನ್ನು ಕೂಡ ವಶಕ್ಕೆ ಪಡೆದುಕೊಳ್ಳವು ಮೂಲಕ ಆತ್ಮವಿಶ್ವಾಸ ಹೆಚ್ಚಿಸಿದೆ.

ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಆತಿಥೇಯ ನ್ಯೂಜಿಲೆಂಡ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆದರೆ ನಾಯಕ ಕೇನ್ ವಿಲಿಯಮ್ಸನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನಿಡಿದ ಕಾರಣದಿಮದಾಗಿ ಕಿವೀಸ್ ಪಡೆ ಉತ್ತಮ ಮೊತ್ತದತ್ತ ಮುಖ ಮಾಡಿತ್ತು. ಆದರೆ ಡೆತ್ ಓವರ್‌ನಲ್ಲಿ ಪಾಕಿಸ್ತಾನ ತಂಡ ಮೇಲುಗೈ ಸಾಧಿಸಿದ ಕಾರಣದಿಂದಾಗಿ ನ್ಯೂಜಿಲೆಂಡ್ ತಂಡ ಹಿನ್ನಡೆ ಅನುಭವಿಸಿತು. ನಿಗದಿತ 20 ಓವರ್‌ಗಲ್ಲಿ ನ್ಯೂಜಿಲೆಂಡ್ 7 ವಿಕೆಟ್ ಕಳೆದುಕೊಂಡು 163 ರನ್‌ಗಳನ್ನು ಗಳಿಸಲು ಶಕ್ತವಾಯಿತು. ನಾಯಕ ಕೇನ್ ವಿಲಿಯಮ್ಸನ್ 38 ಎಸೆತಗಳಲ್ಲಿ 59 ರನ್‌ಗಳನ್ನು ಸಿಡಿಸಿ ತಂಡದ ಪರವಾಗಿ ಮಿಂಚಿದರು.

ಪಾಕ್‌ಗೆ ಪಂದ್ಯ ಗೆಲ್ಲಿಸಿಕೊಟ್ಟ ಮಧ್ಯಮ ಕ್ರಮಾಂಕ
ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ಮೇಲೆ ಸಾಕಷ್ಟು ಟೀಕೆಗಳು ಕೇಳು ಬರುತ್ತಿತ್ತು. ಆದರೆ ಈ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಪ್ರದರ್ಶನದಿಂದಾಗಿಯೇ ಪಾಕಿಸ್ತಾನ ಗೆಲುವು ಸಾಧಿಸಲು ಸಾಧ್ಯವಾಗಿದ್ದು ಗಮನಾರ್ಹ ಅಂಶ. ನಾಯಕ ಬಾಬರ್ ಅಜಂ 15 ರನ್‌ಗಳಿಗೆ ವಿಕೆಟ್ ಕಳೆದುಕೊಂಡರೆ ಮೊಹಮ್ಮದ್ ರಿಜ್ವಾನ್ 34 ರನ್‌ಗಳನ್ನು ಗಳಿಸಿದರಾದರೂ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ್ದರು. ಆದರೆ ಮಧ್ಯಮ ಕ್ರಮಾಂಕದ ಆಟಗಾರರಾದ ಮೊಹಮ್ಮದ್ ನವಾಜ್, ಹೈದರ್ ಅಲಿ ಹಾಗೂ ಇಫ್ತಿಕಾರ್ ಅಹ್ಮದ್ ಸ್ಪೋಟಕ ಪ್ರದರ್ಶನ ನೀಡಿ ಪಂದ್ಯವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸರಣಿ ಗೆದ್ದ ಪಾಕ್: ಬಲಿಷ್ಠ ತಂಡಗಳಿಗೆ ಎಚ್ಚರಿಕೆ ಸಂದೇಶ
ಇನ್ನು ಈ ಗೆಲುವಿನೊಂದಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಬಾಂಗ್ಲಾದೇಶ, ನ್ಯೂಜಿಲೆಂಡ್ ಒಳಗೊಂಡ ತ್ರಿಕೋನ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಈ ಮೂಲಕ ವಿಶ್ವಕಪ್ ಟೂರ್ನಿಗೂ ಭರ್ಜರಿ ಸಿದ್ಧತೆ ಮಾಡಿಕೊಂಡಿರುವ ಪಾಕಿಸ್ತಾನ ಆತ್ಮವಿಶ್ವಾಸವನ್ನು ಕೂಡ ಹೆಚ್ಚಿಸಿಕೊಂಡಿದೆ. ಇನ್ನು ಆತಿಥೆಯ ನ್ಯೂಜಿಲೆಂಡ್ ತಂಡವನ್ನು ಈ ಸರಣಿಯಲ್ಲಿ ಮೂರು ಬಾರಿ ಎದುರಿಸಿದ ಪಾಕಿಸ್ತಾನ ಎರಡು ಬಾರಿ ಗೆಲ್ಲುವ ಮೂಲಕ ತಂಡ ಎಷ್ಟು ಬಲಿಷ್ಠವಾಗಿದೆ ಎಂಬ ಎಚ್ಚರಿಕೆ ಸಂದೇಶವನ್ನು ಇತರ ತಂಡಗಳಿಗೆ ನೀಡಿದೆ. ಇನ್ನು ಈ ಮೂಲಕ ಪಾಕಿಸ್ತಾನ ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೂ ದೊಡ್ಡ ಸಂದೇಶವನ್ನು ನೀಡಿದ್ದು ಯಾರೂ ಕಡೆಗಣಿಸಬಾರದಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ.

ಇತ್ತಂಡಗಳ ಆಡುವ ಬಳಗ
ನ್ಯೂಜಿಲೆಂಡ್ ಆಡುವ ಬಳಗ: ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ಮೈಕೆಲ್ ಬ್ರೇಸ್‌ವೆಲ್, ಇಶ್ ಸೋಧಿ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಬ್ಲೇರ್ ಟಿಕ್ನರ್
ಬೆಂಚ್: ಆಡಮ್ ಮಿಲ್ನೆ, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಡೇನ್ ಕ್ಲೀವರ್, ಮಾರ್ಟಿನ್ ಗಪ್ಟಿಲ್
ಪಾಕಿಸ್ತಾನ ಆಡುವ ಬಳಗ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಶಾನ್ ಮಸೂದ್, ಹೈದರ್ ಅಲಿ, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಹ್ಯಾರಿಸ್ ರೌಫ್
ಬೆಂಚ್: ಮೊಹಮ್ಮದ್ ಹಸ್ನೈನ್, ಉಸ್ಮಾನ್ ಖಾದಿರ್, ಶಾಹೀನ್ ಅಫ್ರಿದಿ, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್, ಶಾನವಾಜ್ ದಹಾನಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications