ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅವರ ಅಬ್ಬರದ ಪ್ರದರ್ಶನ ಮುಂದುವರಿದಿದೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಡಿಕಾಕ್ ಈ ಬಾರಿಯ ವಿಶ್ವಕಪ್ ಟೂರ್ನಿಯ ನಾಲ್ಕನೇ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಡಿಕಾಕ್ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಕುಮಾರ್ ಸಂಗಕ್ಕರ ಅವರೊಂದಿಗೆ ವಿಶೇಷ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ನ್ಯೂಜಿಲೆಂಡ್ ತಂಡದ ಬಲಿಷ್ಠ ಬೌಲಿಂಗ್ ವಿಭಾಗವನ್ನು ಅದ್ಭುತವಾಗಿ ಎದುರಿಸಿದ ಕ್ವಿಂಟನ್ 103 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ್ದಾರೆ. ಮೂರು ಭರ್ಜರಿ ಸಿಕ್ಸರ್ ಹಾಗೂ 10 ಬೌಂಡರಿಗಳನ್ನು ಬಾರಿಸಿ ಡಿಕಾಕ್ ಗಮನಸೆಳೆದ ಡಿಕಾಕ್ ಅಂತಿಮವಾಗಿ 116 ಎಸೆತಗಳಲ್ಲಿ 114 ರನ್‌ಗಳಿಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ಮತ್ತೊಂದು ಅದ್ಭುತ ಇನ್ನಿಂಗ್ಸ್ ಮುಗಿಸಿದ್ದಾರೆ.

ಈ ಮೂಲಕ ಡಿಕಾಕ್ ಒಂದೇ ವಿಶ್ವಕಪ್ ಟೂರ್ನಿಯಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ ಕೇವಲ ಮೂರನೇ ಆಟಗಾರ ಎನ್ನುವ ಹೆಗ್ಗಳಿಕೆಗೆ ಡಿಕಾಕ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಕುಮಾರ್ ಸಂಗಕ್ಕರ ಹಾಗೂ ರೋಹಿತ್ ಶರ್ಮಾ ಮಾತ್ರವೇ ಈ ಸಾಧನೆ ಮಾಡಿದ್ದರು. ಸಂಗಕ್ಕರ ಆಸ್ಟ್ರೇಲಿಯಾದಲ್ಲಿ ನಡೆದ 2015ರ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ್ದರೆ ರೋಹಿತ್ ಶರ್ಮಾ 2019ರ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿ ಮಿಂಚಿದ್ದ.
ಇನ್ನು ಕ್ವಿಂಟನ್ ಡಿಕಾಕ್ ಈ ಬಾರಿಯ ವಿಶ್ವಕಪ್‌ನ ಬಳಿಕ ಅಂತಾರಾಷ್ಟ್ರೀತ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಹೇಳುವುದಾಗಿ ಟೂರ್ನಿಯ ಆರಂಭಕ್ಕೂ ಮುನ್ನವೇ ಘೋಷಿಸಿದ್ದರು. ಈ ಟೂರ್ನಿ ಆರಂಭವಾದ ಬಳಿಕ ಅತ್ಯದ್ಭುತ ಫಾರ್ಮ್‌ನಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ದಕ್ಷಿಣ ಆಫ್ರಿಕಾದ ಈ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಕ್ವಿಂಟನ್ ಶತಕ ಸಿಡಿಸುವ ಮೂಲಕ ಅಭಿಯಾನವ್ನು ಭರ್ಜರಿಯಾಗಿ ಆರಂಭಿಸಿದ್ದರು. ಅದಾದ ಬಳಿಕ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ತಂಡಗಳ ವಿರುದ್ಧವೂ ಡಿಕಾಕ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇದೀಗ ಈ ಪಟ್ಟಿಗೆ ಮತ್ತೊಂದು ಶತಕ ಸೇರಿಕೊಂಡಿದೆ.
ಇನ್ನು ಆರಂಭಿಕ ಆಟಗಾರ ಡಿಕಾಕ್ ಈ ಟೂರ್ನಿಯಲ್ಲಿ ಈಗಾಗಲೇ 500 ರನ್‌ಗಳನ್ನು ದಾಟಿದ ಸಾಧನೆ ಮಾಡಿದ್ದಾರೆ. 2023ರ ಆವೃತ್ತಿಯಲ್ಲಿ ಈ ದೊಡ್ಡ ಮೈಲಿಗಲ್ಲು ದಾಟಿದ ಮೊದಲ ಬ್ಯಾಟರ್ ಡಿಕಾಕ್. ಈ ಮೂಲಕ 2007ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಜಾಕಸ್ ಕಾಲಿಸ್ ಅವರ 485 ರನ್‌ಗಳನ್ನು ಸಾಧನೆಯನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಒಂದು ವಿಶ್ವಕಪ್ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ಪರವಾಗಿ ಅತಿ ಹೆಚ್ಚು ರನ್ ದಾಖಲಿಸಿದ ಬ್ಯಾಟರ್ ಎಂಬ ದಾಖಲೆ ಕೂಡ ತಮ್ಮದಾಗಿಸಿಕೊಂಡಿದ್ದಾರೆ.