
ಗುರುವಾರ, ಮಾರ್ಚ್ 9ರಿಂದ ಆತಿಥೇಯ ನ್ಯೂಜಿಲೆಂಡ್ ಮತ್ತು ಪ್ರವಾಸಿ ಶ್ರೀಲಂಕಾ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ತವರಿನಲ್ಲಿ ಸರಣಿ ಗೆಲ್ಲುವುದಾಗಿ ನ್ಯೂಜಿಲೆಂಡ್ ತಂಡ ಭರವಸೆ ಹೊಂದಿದೆ.
ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (2021-23) ಭಾಗವಾಗಿದೆ. ಶ್ರೀಲಂಕಾ ತಂಡವು ನ್ಯೂಜಿಲೆಂಡ್ ವಿರುದ್ಧ 2-0 ಅಂತರದಲ್ಲಿ ಗೆದ್ದರೆ, ಜೂನ್‌ನಲ್ಲಿ ನಡೆಯುವ ಫೈನಲ್ ಪಂದ್ಯ ಆಡುವ ಅವಕಾಶವಿದ್ದು, ಶ್ರೀಲಂಕಾ ತಂಡದ ಕನಸನ್ನು ಭಗ್ನಗೊಳಿಸುವುದಾಗಿ ನ್ಯೂಜಿಲೆಂಡ್ ನಾಯಕ ಟಿಮ್ ಸೌಥಿ ಹೇಳಿದ್ದಾರೆ.
ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧ ತಮ್ಮ ರೋಚಕ ಪಂದ್ಯದಲ್ಲಿ ಗೆಲುವು ದಾಖಲಿಸಿದಂತೆ, ಗುರುವಾರ, ಮಾರ್ಚ್ 9ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಪ್ರಾರಂಭವಾಗುವ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ ತಂಡಕ್ಕೆ ಆತಿಥ್ಯ ವಹಿಸಿದಾಗ ಗೆಲುವು ಸಾಧಿಸುತ್ತೇವೆ ಎಂದು ಟಿಮ್ ಸೌಥಿ ಭರವಸೆ ವ್ಯಕ್ತಪಡಿಸಿದರು.

ಕಳೆದ ವಾರ ವೆಲ್ಲಿಂಗ್ಟನ್‌ನಲ್ಲಿ ಬ್ರೆಂಡನ್ ಮೆಕಲಮ್ ಮಾರ್ಗದರ್ಶನದ ಮತ್ತು ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ತಂಡವನ್ನು ಒಂದು ರನ್‌ನಿಂದ ರೋಚಕವಾಗಿ ಸೋಲಿಸಿದ ನ್ಯೂಜಿಲೆಂಡ್ ತಂಡ 1-1 ಅಂತರದಲ್ಲಿ ಸರಣಿ ಸಮಬಲಗೊಳಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಇದೀಗ ಟಿಮ್ ಸೌಥಿ ನಾಯಕತ್ವದ ನ್ಯೂಜಿಲೆಂಡ್ ತಂಡ ಎರಡು ಟೆಸ್ಟ್ ಪಂದ್ಯಗಳಿಗಾಗಿ ಪ್ರವಾಸಿ ಶ್ರೀಲಂಕಾ ವಿರುದ್ಧ ತಮ್ಮ ಗಮನ ಹರಿಸಿದೆ. ಶ್ರೀಲಂಕಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಕನಸು ಭಗ್ನ ಮಾಡುತ್ತೇವೆ ಎಂದು ಟಿಮ್ ಸೌಥಿ ಹೇಳಿದ್ದಾರೆ.
"ನಾವು ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದ ಹೊರಗುಳಿದಿದ್ದೇವೆ. ಮುಂದಿನ ಎರಡು ವಾರಗಳವರೆಗೆ ನಮಗೆ ಆಡಲು ಸಾಕಷ್ಟು ಪಂದ್ಯಗಳಿವೆ," ಎಂದು ಟಿಮ್ ಸೌಥಿ ತಿಳಿಸಿದರು.

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಲೆಕ್ಕಾಚಾರದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಪೈಪೋಟಿ ಇದೆ. ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 3-1 ಅಂತರದಲ್ಲಿ ಸರಣಿ ಗೆದ್ದರೆ, ನೇರವಾಗಿ ಫೈನಲ್ ಪ್ರವೇಶಿಸಲಿದೆ.
ಇನ್ನು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಪಂದ್ಯದಲ್ಲಿ ಸೋತರೆ, ಇತ್ತ ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ ಒಂದು ಪಂದ್ಯವನ್ನು ಸೋತರೂ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ನೆರವಾಗಲಿದೆ.
ಶ್ರೀಲಂಕಾ ವಿರುದ್ಧದ ಸರಣಿಗಾಗಿ ನ್ಯೂಜಿಲೆಂಡ್ ತಂಡದ ಸಿದ್ಧತೆಗಳು ಸಂಪೂರ್ಣವಾಗಿಲ್ಲ. ಪ್ರಮುಖ ವೇಗಿ ಕೈಲ್ ಜೇಮಿಸನ್ ಅವರು ಕಳೆದ ವರ್ಷದಿಂದ ಬೆನ್ನುನೋವಿನಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ.
ಇನ್ನು ಮಾಜಿ ನಾಯಕ ಕೇನ್ ವಿಲಿಯಮ್ಸನ್ ಕೂಡ ಈ ವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಅಭ್ಯಾಸಕ್ಕೆ ಗೈರುಹಾಜರಾಗಿದ್ದಾರೆ. ಏಕೆಂದರೆ, ತಮ್ಮ ಅಜ್ಜಿಯ ಸಾವಿನಿಂದಾಗಿ ಟೌರಂಗದಲ್ಲಿರುವ ಕುಟುಂಬದೊಂದಿಗೆ ಉಳಿದಿದ್ದಾರೆ.