
ಸುಮಾರು 12 ವರ್ಷಗಳ ನಂತರ ಭಾರತದಲ್ಲಿ ಏಕದಿನ ವಿಶ್ವಕಪ್ ಆಯೋಜನೆಯಾಗುತ್ತಿದೆ. 2011ರಲ್ಲಿ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸಹಯೋಗದಲ್ಲಿ ಏಕದಿನ ವಿಶ್ವಕಪ್ ಆಯೋಜನೆಯಾಗಿತ್ತು. ಆಗ ಭಾರತ ತಂಡ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು ಚಾಂಪಿಯನ್ ಆಗಿತ್ತು.
ಇದೀಗ ಮತ್ತೆ ಭಾರತಕ್ಕೆ ಏಕದಿನ ವಿಶ್ವಕಪ್ ಕಾಲಿಟ್ಟಿದೆ ಮತ್ತು ಇಡೀ ವಿಶ್ವಕಪ್ ಪಂದ್ಯಗಳು ಭಾರತದಲ್ಲಿ ಮಾತ್ರ ನಡೆಯಲಿವೆ. ಇಸ್‌ಪಿಎನ್ ಕ್ರಿಕ್ಇನ್ಫೋ ವರದಿಯ ಪ್ರಕಾರ, 2023ರ ಏಕದಿನ ವಿಶ್ವಕಪ್ ಅಕ್ಟೋಬರ್ 5ರಂದು ಪ್ರಾರಂಭವಾಗಲಿದ್ದು, ನವೆಂಬರ್ 19ರಂದು ಅಂತಿಮ ಪಂದ್ಯ ನಡೆಯಲಿದೆ ಎಂದು ತಿಳಿಸಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವಕಪ್ ಪಂದ್ಯಾವಳಿಗಾಗಿ ಸುಮಾರು 12 ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಫೈನಲ್ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲಾಗುವುದು ಎಂದು ವರದಿಯಲ್ಲಿ ತಿಳಿಸಿದೆ.
ಇತರ ಸ್ಥಳಗಳೆಂದರೆ, ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈ ಶಾರ್ಟ್‌ಲಿಸ್ಟ್‌ನಲ್ಲಿವೆ. ಪಂದ್ಯಾವಳಿಯು 46 ದಿನಗಳಲ್ಲಿ 48 ಪಂದ್ಯಗಳನ್ನು ಹೊಂದಿರುತ್ತದೆ. ವಿಶ್ವದ ಅಗ್ರ 10 ತಂಡಗಳು ಏಕದಿನ ವಿಶ್ವಕಪ್ ಟ್ರೋಫಿಗಾಗಿ ಸೆಣಸಾಡಲಿವೆ.

ವರದಿಯಲ್ಲಿ ವಿಶ್ವಕಪ್‌ನ ಲೀಗ್ ಪಂದ್ಯಗಳು ನಡೆಯುವ ಪ್ರಮುಖ ಸ್ಥಳಗಳ ಪಟ್ಟಿಯನ್ನು ಹೇಳಿದೆ. ಪಂದ್ಯಾವಳಿಯ ಮೊದಲು ಅಭ್ಯಾಸ ಪಂದ್ಯಗಳಿಗಾಗಿ ಬಿಸಿಸಿಐ ಇನ್ನೂ 2-3 ಸ್ಥಳಗಳನ್ನು ಘೋಷಿಸುವ ನಿರೀಕ್ಷೆಯಿದೆ.
ಇತರ ಸ್ಥಳಗಳ ಆಯ್ಕೆಯ ಹಿಂದಿನ ಪ್ರಮುಖ ಅಂಶವೆಂದರೆ ಮಳೆ ಸಾಧ್ಯತೆಗಳು ಮತ್ತು ಸಮಯಕ್ಕೆ ಸರಿಯಾಗಿ ಸ್ಟೇಡಿಯಂ ಸಿದ್ಧಪಡಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನಿಸಲಾಗುತ್ತದೆ.
ಏಕದಿನ ವಿಶ್ವಕಪ್ ಪಂದ್ಯಾವಳಿಗಳನ್ನು ಸಾಮಾನ್ಯವಾಗಿ ಒಂದು ವರ್ಷ ಮುಂಚಿತವಾಗಿ ಘೋಷಿಸಲಾಗುತ್ತಿದ್ದರೂ, ಪಾಕಿಸ್ತಾನ ಕ್ರಿಕೆಟಿಗರಿಗೆ ವೀಸಾ ನೀಡುವ ಸುತ್ತಲಿನ ಪರಿಸ್ಥಿತಿ ಮತ್ತು ಭಾರತ ಸರ್ಕಾರದಿಂದ ತೆರಿಗೆ ವಿನಾಯಿತಿಗಳನ್ನು ಖಚಿತಪಡಿಸಿಕೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕಾಯುತ್ತಿದೆ.
ಬಿಸಿಸಿಐ ಮತ್ತು ಐಸಿಸಿ ಸಹಿ ಮಾಡಿದ ಒಪ್ಪಂದದ ಭಾಗವಾಗಿ, 2016ರಿಂದ 2023ರವರೆಗಿನ ಮೂರು ಪಂದ್ಯಾವಳಿಗಳಿಗೆ ತೆರಿಗೆ ವಿನಾಯಿತಿಯನ್ನು ಭರವಸೆ ನೀಡಲಾಗಿತ್ತು. ಹೀಗಾಗಿ ಐಸಿಸಿ ಅನುಕೂಲವಾಗುವಂತೆ ಬಿಸಿಸಿಐ ತೆರಿಗೆ ವಿನಾಯಿತಿಗೆ ಸಹಕರಿಸುವ ಸಾಧ್ಯತೆ ಹೊಂದಿದೆ.
ಮತ್ತೊಂದೆಡೆ, ಪಾಕಿಸ್ತಾನ ಕ್ರಿಕೆಟ್ ತಂಡ 2013ರಿಂದ ಯಾವುದೇ ದ್ವಿಪಕ್ಷೀಯ ಸರಣಿಗಾಗಿ ಭಾರತಕ್ಕೆ ಪ್ರಯಾಣಿಸಿಲ್ಲ. ಆದರೆ ಅವರ ವೀಸಾಗಳನ್ನು ಭಾರತ ಸರ್ಕಾರವು ತೆರವುಗೊಳಿಸುತ್ತದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಪಾಕಿಸ್ತಾನ ಮತ್ತು ಭಾರತ ತಂಡಗಳು ದಶಕದಿಂದ ದ್ವಿಪಕ್ಷೀಯ ಕ್ರಿಕೆಟ್ ಸಹ ಆಡುತ್ತಿಲ್ಲ. ಆದರೆ ಎರಡೂ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಪರಸ್ಪರರ ವಿರುದ್ಧ ಆಡುವುದನ್ನು ಮುಂದುವರೆಸಿವೆ.
2016ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನ ಕೊನೆಯದಾಗಿ ಭಾರತಕ್ಕೆ ಪ್ರಯಾಣ ಬೆಳೆಸಿತ್ತು. 2012-13ರಲ್ಲಿ ಕೊನೆಯ ಬಾರಿಗೆ ಭಾರತದಲ್ಲಿ ದ್ವಿಪಕ್ಷೀಯ ಸರಣಿ ಆಡಿತ್ತು.
ಕಳೆದ ವಾರಾಂತ್ಯದಲ್ಲಿ ದುಬೈನಲ್ಲಿ ನಡೆದ ಐಸಿಸಿ ಅಪೆಕ್ಸ್ ಮಂಡಳಿಯ ತ್ರೈಮಾಸಿಕ ಸಭೆಗಳಲ್ಲಿ ಪಾಕಿಸ್ತಾನದ ಆಟಗಾರರಿಗೆ ವೀಸಾ ತೆರವುಗೊಳಿಸುವುದರ ಬಗ್ಗೆ ಬಿಸಿಸಿಐ ಖಚಿತಪಡಿಸಿದೆ.