ರೋಹಿತ್ ಶರ್ಮಾ ವಿಶ್ವದಾಖಲೆಗೆ ನಾಲ್ಕು ವರ್ಷ: 3ನೇ ದ್ವಿಶತಕದ ಹಾದಿಯ ಹಿನ್ನೋಟ

ಭಾರತೀಯ ಕ್ರಿಕೆಟ್ ತಂಡದ ಅದ್ಭುತ ಆಟಗಾರ ರೋಹಿತ್ ಶರ್ಮಾ ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ಅವರು ಭಾರತದ ವೈಟ್‌ಬಾಲ್ ಕ್ರಿಕೆಟ್ ತಂಡದ ನಾಯಕನಾಗಿಯೂ ಆಯ್ಕೆಯಾಗಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸಾಕಷ್ಟು ಸಾಧನೆ ಮಾಡಿರುವ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದು ಇಂದಿಗೆ ಭರ್ತಿ ನಾಳ್ಕು ವರ್ಷವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಒಂದು ದ್ವಿಶತಕ ದಾಖಲಿಸುವುದೇ ಶ್ರೇಷ್ಠ ಸಾಧನೆಯೆನಿಸಿರುವಾಗ ರೋಹಿತ್ ಶರ್ಮಾ ಈ ಸಾಧನೆಯನ್ನು ಒಂದಲ್ಲ ಎರಡಲ್ಲ ಮೂರು ಬಾರಿ ಮಾಡಿ ತನ್ನ ತಾನೋರ್ವ ಎಂತಾ ಅದ್ಭುತ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ.
ರೋಹಿತ್ ಶರ್ಮಾ ಇದೇ ದಿನ ಅಂದರೆ ಡಿಸೆಂಬರ್ 13 ರಂದು 2017ರಲ್ಲಿ ತನ್ನ ಮೂರನೇ ದ್ವಿಶತಕವನ್ನು ಸಿಡಿಸಿ ವಿಶ್ವ ಕ್ರಿಕೆಟ್ ಅಭಿಮಾನಿಗಳು ಮತ್ತೊಮ್ಮೆ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಈವರೆಗೂ ಯಾರಿಂದಲೂ ಸಾಧ್ಯವಾಗದ ವಿಶ್ವದಾಖಲೆಯೊಂದನ್ನು ಹಿಟ್ ಮ್ಯಾನ್ ರೋಹಿತ್ ಶರ್ಮಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಹಾಗಾದರೆ ರೋಹಿತ್ ಶರ್ಮಾ ಅವರ ಈ ಸಾಧನೆಯ ಹಾದಿ ಹೇಗಿತ್ತು? ಅದರ ಬಗ್ಗೆ ವರದಿ ಇಲ್ಲಿದೆ ಮುಂದೆ ಓದಿ..

ದಿಗ್ಗಜರ ಸಾಲಿಗೆ ಸೇರಿದ ಹಿಟ್‌ಮ್ಯಾನ್
ವಿಶ್ವ ಕ್ರಿಕೆಟ್‌ನಲ್ಲಿ ಮೊದಲಿಗೆ ಈ ಸಾಧನೆಯನ್ನು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮಾಡಿದ್ದರು. ಆದಾದ ಬಳಿಕ ಸೆಹ್ವಾಗ್ ಕೂಡ ದ್ವಿಶತಕವನ್ನು ಸಿಡಿಸಿ ಅಬ್ಬರಿಸಿದ್ದರು. 2013ರಲ್ಲಿ ರೋಹಿತ್ ಶರ್ಮಾ ಈ ಸಾಧನೆಯನ್ನು ಪುನರಾವರ್ತಿಸುವ ಮೂಲಕ ಮೂರನೆಯ ಕ್ರಿಕೆಟಿಗನಾಗಿ ಈ ದಿಗ್ಗಜರ ಸಾಲಿಗೆ ಮೂಂಬೈ ಮೂಲದ ಕ್ರಿಕೆಟಿಗ ಸೇರಿಕೊಂಡಿದ್ದರು. ರೋಹಿತ್ ಶರ್ಮಾ ತಮ್ಮ ಮೊದಲ ದ್ವಿಶತಕವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡಿದಿದ್ದರು. 159 ಎಸೆತಗಳಲ್ಲಿ 12 ಬೌಂಡರಿ ಹಾಗೂ 16 ಸಿಕ್ಸರ್‌ಗಳ ನೆರವಿನಿಂದ ಅಂದು 209 ರನ್ ಬಾರಿಸಿದ್ದರು ಶರ್ಮಾ.

ಈಡನ್ ಗಾರ್ಡನ್‌ನಲ್ಲಿ ಸಿಡಿದಿತ್ತು ಶರ್ಮಾ 2ನೇ ದ್ವಿಶತಕ
ರೋಹಿತ್ ಶರ್ಮಾ ತಮ್ಮ ಎರಡನೇ ದ್ವಿಶತಕವನ್ನು ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಸಿಡಿಸಿದ್ದರು. ಆ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ನ ಸರ್ವಾಧಿಕ 264 ರನ್ ಸಿಡಿಸಿ ಅಬ್ಬರಿಸಿದ್ದರು ರೋಹಿತ್ ಶರ್ಮಾ. 173 ಎಸೆತಗಳಲ್ಲಿ 33 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ ಈ ದಾಖಲೆಯ ರನ್ ಹರಿದುಬಂದಿತ್ತು.

ಮೂರನೇ ದ್ವಿಶತಕಕ್ಕೆ ಸಾಕ್ಷಿಯಾದ ಮೊಹಾಲಿ
ರೋಹಿತ್ ಶರ್ಮಾ ಸಿಡಿಸಿದ ಮೂರನೇ ದ್ವಿಶತಕವೂ ಕೂಡ ಶ್ರೀಲಂಕಾ ವಿರುದ್ಧವೇ ಸಿಡಿದಿತ್ತು. ಮೊಹಾಲಿಯಲ್ಲಿ ನಡೆದ ಆ ಪಂದ್ಯದಲ್ಲಿ ರೋಹಿತ್ 153 ಎಸೆತಗಳಲ್ಲಿ 208 ರನ್ ಬಾರಿಸಿದ್ದರು. ಇದರಲ್ಲಿ 13 ಬೌಂಡರಿ ಹಾಗೂ 12 ಸಿಕ್ಸರ್ ಸೇರಿಕೊಂಡಿತ್ತು. ಕುತೂಹಲಕಾರಿ ಸಂಗತಿಯೆಂದರೆ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತೀಯ ತಂಡದ ನಾಯಕನಾಗಿ ಮುನ್ನಡೆಸಿದ್ದರು.

ನಿಧಾನಗತಿಯಲ್ಲಿ ಆರಂಭ ಪಡೆದಿದ್ದ ಶರ್ಮಾ
ರೋಹಿತ್ ಶರ್ಮಾ ಅವರು ಈ ದ್ವಿಶತಕವನ್ನು ಸಿಡಿಸುವಿದಕ್ಕೂ ಮುನ್ನ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ನಡೆಸಿದ್ದರು. ಮೊದಲ ಅರ್ಧ ಶತಕದ ಗಡಿ ದಾಟಲು ಅವರು 65 ಎಸೆತಗಳನ್ನು ತೆಗೆದುಕೊಂಡಿದ್ದರು. ಮುಂದಿನ 50 ರನ್ ಗಳಿಸಲು 50 ಎಸೆತ ಎದುರಿಸಿದ್ದು. ಅಂದರೆ ಮೊದಲ ಶತಕಕ್ಕೆ 115 ಎಸೆತಗಳನ್ನು ಎದುರಿಸಿದ್ದರು ರೋಹಿತ್. ಅದಾದ ಬಳಿಕ ಸಿಡಿದ ಅವರು ತಲಾ 15 ಎಸೆತಗಳಲ್ಲಿ ಮೂರನೇ ಹಾಗೂ ನಾಲ್ಕನೇ 50 ರನ್ ಬಾರಿಸಿ ದ್ವಿಶತಕವನ್ನು ಪೂರೈಸಿದ್ದರು. ಅಂದರೆ ಮುಂದಿನ 100 ರನ್‌ಗಳನ್ನು ಗಳಿಸಲು ರೋಹಿತ್ ಎದುರಿಸಿದ್ದ ಕೇವಲ 30 ಎಸೆತ ಮಾತ್ರ! ನಿಧಾನಗತಿಯಲ್ಲಿ ಆರಂಭಿಸಿದ್ದ ರೋಹಿತ್ ಭರ್ಜರಿಯಾಗಿ 3ನೇ ದ್ವಿಶತಕ ಸಿಡಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications