
ಮುಂಬೈ: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ತಯಾರಿ ನಡೆಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರೊಬ್ಬರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವರದಿಯಾಗಿದೆ. ಸಿಎಸ್‌ಕೆಯ ಕಂಟೆಂಟ್ ತಂಡದ ಸದಸ್ಯರೊಬ್ಬರಿಗೆ ಕೋವಿಡ್-19 ಪಾಸಿಟಿವ್ ಬಂದಿದೆ.
ಏಪ್ರಿಲ್ 9ರಿಂದ 2021ರ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಏಪ್ರಿಲ್ 10ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ಗೆ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನವೇ ಸಿಎಸ್‌ಕೆ ತಂಡಕ್ಕೆ ಕೊರೊನಾ ಭೀತಿ ಶುರುವಾಗಿದೆ. ಕಳೆದ ಸೀಸನ್‌ನಲ್ಲೂ ಸಿಎಸ್‌ಕೆಯ ಇಬ್ಬರು ಆಟಗಾರರಿಗೆ ಕೊರೊನಾ ಪಾಸಿಟಿವ್ ಬಂದಿತ್ತು.
'ಸಿಎಸ್‌ಕೆ ಕಂಟೆಂಟ್ ತಂಡದ ಒಬ್ಬ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಅವರ ಟೆಸ್ಟ್ ಫಲಿತಾಂಶ ಇವತ್ತು ಬಂದಿದೆ. ಆ ಬಳಿಕ ಅವರನ್ನು ತಂಡದಿಂದ ಐಸೊಲೇಶನ್‌ನಲ್ಲಿ ಇಡಲಾಗಿದೆ. ಸೋಂಕಿತ ವ್ಯಕ್ತಿ ಯಾವುದೇ ಆಟಗಾರರು ಅಥವಾ ಬೆಂಬಲ ಸಿಬ್ಬಂದಿಯ ಸಮೀಪಕ್ಕೆ ಹೋಗಿಲ್ಲ ಅನ್ನೋದನ್ನು ಈ ಮೂಲಕ ಖಾತರಿಪಡಿಸುತ್ತಿದ್ದೇವೆ,' ಎಂದು ಸಿಎಸ್‌ಕೆ ಮಾಹಿತಿ ನೀಡಿದೆ.
ಯುಎಇಯಲ್ಲಿ ನಡೆದಿದ್ದ ಹಿಂದಿನ ಐಪಿಎಲ್ ಸೀಸನ್‌ನಲ್ಲೂ ಸಿಎಸ್‌ಕೆಯ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಮತ್ತು ವೇಗಿ ದೀಪಕ್ ಚಾಹರ್‌ಗೆ ಕೋವಿಡ್-19 ಸೋಂಕು ತಗುಲಿತ್ತು. ಏಪ್ರಿಲ್ 9ರಂದು ನಡೆಯುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಮತ್ತು ಬೆಂಗಳೂರು ತಂಡಗಳು ಕಾದಾಡಲಿವೆ.