
ಕ್ರಿಕೆಟ್ ಜಗತ್ತಿನಲ್ಲಿ ಸದ್ಯಕ್ಕಿರುವ ಅತಿ ದೊಡ್ಡ ಮಟ್ಟದ ವಿವಾದವೆಂದರೆ ಅದು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಉಂಟಾಗಿರುವ ಬಿರುಕು. ಹೌದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ನಡುವೆ ನಾಯಕತ್ವದ ವಿಚಾರವಾಗಿ ಮನಸ್ತಾಪಗಳು ಮೂಡಿರುವುದು ಇಬ್ಬರ ಮಾತುಗಳಿಂದಲೇ ತಿಳಿದುಬಂದಿದೆ.
ಬಿಸಿಸಿಐ ಮತ್ತು ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ, ಬಿಸಿಸಿಐ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ಆಟಗಾರರ ಅಭಿಪ್ರಾಯವನ್ನೂ ಕೇಳುವುದಿಲ್ಲ ಮತ್ತು ಆಟಗಾರರಿಗೆ ಮಾಹಿತಿಯನ್ನು ಕೂಡ ನೀಡುವುದಿಲ್ಲ ಎಂಬ ಆರೋಪ ಈ ಹಿಂದಿನಿಂದಲೂ ಇತ್ತು. ಆದರೆ ಈ ಆರೋಪವನ್ನು ಪದೇಪದೇ ತಳ್ಳಿಹಾಕುತ್ತಿದ್ದ ಬಿಸಿಸಿಐ ಯಾವುದೇ ಕ್ರಮವನ್ನು ಕೈಗೊಳ್ಳಬೇಕಾದರೂ ಸಹ ತಂಡದ ಆಟಗಾರರಿಗೆ ತಪ್ಪದೇ ಮಾಹಿತಿಯನ್ನು ನೀಡುತ್ತಿರುವುದಾಗಿ ಹೇಳಿಕೆಗಳನ್ನು ನೀಡುತ್ತಿತ್ತು.
ಆದರೆ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾಕ್ಕೆ ಹಾರುವ ಮುನ್ನ ನಡೆಸಿದ ಮಾಧ್ಯಮಗೋಷ್ಠಿಯಿಂದಾಗಿ ಟೀಮ್ ಇಂಡಿಯಾ ಆಟಗಾರರು ಮತ್ತು ಬಿಸಿಸಿಐ ನಡುವೆ ಉತ್ತಮ ಸಂಬಂಧವಿಲ್ಲ ಎಂಬ ಕಟುಸತ್ಯ ಹೊರಬಿದ್ದಿದೆ ಎಂದೇ ಹೇಳಬಹುದು. ಹೌದು, ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ ವಿರಾಟ್ ಕೊಹ್ಲಿ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕನಾಗಿ ಮುಂದುವರಿಯುವುದಾಗಿ ಹೇಳಿಕೆಯನ್ನು ನೀಡಿದ್ದರು. ಆದರೆ ಕೆಲವೇ ದಿನಗಳಲ್ಲಿ ರೋಹಿತ್ ಶರ್ಮಾ ಅವರನ್ನು ಭಾರತ ಏಕದಿನ ತಂಡದ ನೂತನ ನಾಯಕನನ್ನಾಗಿ ಆಯ್ಕೆ ಮಾಡಿದ ಬಿಸಿಸಿಐ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಿತು.
ಹೀಗೆ ದಿಢೀರನೆ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಿದ ಬಿಸಿಸಿಐ ವೈಟ್ ಬಾಲ್ ಕ್ರಿಕೆಟ್ ಮಾದರಿಗಳಿಗೆ ಓರ್ವನೇ ನಾಯಕನಿರಬೇಕು ಎಂಬ ಕಾರಣದಿಂದಾಗಿ ಈ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದು ಸ್ಪಷ್ಟನೆಯನ್ನೂ ನೀಡಿತ್ತು. ಹಾಗೂ ಆ ಸಂದರ್ಭದಲ್ಲಿ ಮಾತನಾಡಿದ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸುತ್ತೇನೆ ಎಂದು ನಿರ್ಧಾರವನ್ನು ಕೈಗೊಂಡ ಸಂದರ್ಭದಲ್ಲಿ ಬಿಸಿಸಿಐ ವಿರಾಟ್ ಕೊಹ್ಲಿ ನಿರ್ಧಾರವನ್ನು ವಿರೋಧಿಸಿತ್ತು ಹಾಗೂ ನಾಯಕನಾಗಿ ಮುಂದುವರಿಯುವಂತೆ ಸೂಚನೆಯನ್ನು ನೀಡಿತ್ತು ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಮನವಿ ಮಾಡಿದರೂ ಕೇಳದ ವಿರಾಟ್ ಕೊಹ್ಲಿ ತಮ್ಮ ನಿರ್ಧಾರದಂತೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದರು ಎಂದು ಸಹ ಸೌರವ್ ಗಂಗೂಲಿ ತಿಳಿಸಿದ್ದರು.
ಆದರೆ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಈ ಕುರಿತಾಗಿ ಪ್ರತಿಕ್ರಿಯಿಸಿ ತಾನು ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸುತ್ತೇನೆ ಎಂಬ ನಿರ್ಧಾರವನ್ನು ಕೈಗೊಂಡಾಗ ಬಿಸಿಸಿಐ ಯಾವುದೇ ಪ್ರತಿರೋಧವನ್ನು ವ್ಯಕ್ತಪಡಿಸದೇ ತನ್ನ ನಿಲುವನ್ನು ಸ್ವೀಕರಿಸಿತು ಎಂದು ಹೇಳಿಕೆ ನೀಡಿದರು. ಹೀಗೆ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದೇ ತಡ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ನಾಯಕತ್ವದ ಕುರಿತು ನೀಡಿದ್ದ ಹೇಳಿಕೆ ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸತೊಡಗಿದ ವಿರಾಟ್ ಕೊಹ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಗಂಗೂಲಿ ವಿರುದ್ಧ ಕಿಡಿಕಾರಿದರು. ಬಿಸಿಸಿಐಗೆ ನಾಚಿಕೆಯಾಗಬೇಕು ಮತ್ತು ಸೌರವ್ ಗಂಗೂಲಿಗೆ ನಾಚಿಕೆಯಾಗಬೇಕು ಎಂಬ ಟ್ರೆಂಡ್ ಮಾಡಿದ ಕೊಹ್ಲಿ ಅಭಿಮಾನಿಗಳು ಬಿಸಿಸಿಐ ಮತ್ತು ಸೌರವ್ ಗಂಗೂಲಿ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.
ಹೀಗೆ ಸೌರವ್ ಗಂಗೂಲಿ ಅತಿ ದೊಡ್ಡ ಮಟ್ಟದ ಟೀಕೆ ಮತ್ತು ವಿರೋಧಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸ್ವೀಕರಿಸಿದ ಬೆನ್ನಲ್ಲೇ ಕೆಲ ಕ್ರಿಕೆಟ್ ಅಭಿಮಾನಿಗಳು ಸೌರವ್ ಗಂಗೂಲಿ ಪರ ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಟ್ ಬೀಸಿದ್ದಾರೆ. #NationStandsWithDada ಎಂಬ ಟ್ಯಾಗ್ ಬಳಸುವುದರ ಮೂಲಕ ಟ್ವಿಟ್ಟರ್ ಟ್ರೆಂಡ್ ಮಾಡಿರುವ ಸೌರವ್ ಗಂಗೂಲಿ ಅಭಿಮಾನಿಗಳು ವಿರಾಟ್ ಕೊಹ್ಲಿ ಅಭಿಮಾನಿಗಳು ಮಾಡಿದ್ದ ಟೀಕೆಗಳ ವಿರುದ್ಧ ದನಿ ಎತ್ತಿ ತಾವು ಸೌರವ್ ಗಂಗೂಲಿ ಪರ ನಿಲ್ಲುವುದಾಗಿ ಬೆಂಬಲ ಸೂಚಿಸಿದ್ದರು.
ಹೀಗೆ ಸೌರವ್ ಗಂಗೂಲಿ ಪರ ಟ್ವಿಟರ್ ಟ್ರೆಂಡ್ ನಡೆಯುತ್ತಿದ್ದಂತೆ ಅತ್ತ ಮತ್ತೊಮ್ಮೆ ಸಿಡಿದೆದ್ದ ವಿರಾಟ್ ಕೊಹ್ಲಿ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದಿಟ್ಟು #WorldStandsWithKohli ಎಂಬ ಟ್ಯಾಗ್ ಟ್ರೆಂಡ್ ಮಾಡಿದ್ದಾರೆ. ಈ ಮೂಲಕ ಸೌರವ್ ಗಂಗೂಲಿ ಪರ ದೇಶ ನಿಂತರೆ ವಿರಾಟ್ ಕೊಹ್ಲಿ ಪರ ವಿಶ್ವವೇ ನಿಲ್ಲಲಿದೆ ಎಂದು ಗಂಗೂಲಿ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಅಭಿಮಾನಿಗಳು ಟಾಂಗ್ ನೀಡಿದ್ದಾರೆ. ಒಂದೆಡೆ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ಭಿನ್ನ ವಿಭಿನ್ನ ಹೇಳಿಕೆಗಳನ್ನು ನೀಡುವುದರ ಮೂಲಕ ವಿವಾದಕ್ಕೆ ಎಡೆ ಮಾಡಿಕೊಡುತ್ತಿದ್ದರೆ, ಮತ್ತೊಂದೆಡೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ದ್ವೇಷಿಸುವುದರ ಮೂಲಕ ಕಿಡಿಕಾರಲು ಆರಂಭಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ಅಭಿಮಾನಿಗಳ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಪೂರ್ಣವಿರಾಮ ಯಾವಾಗ ಬೀಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.