
ಮೆಲ್ಬರ್ನ್, ಮೇ 8: ಚೆಂಡು ವಿರೂಪ ಪ್ರಕರಣದ ಅವಮಾನದ ಬಳಿಕ ಹೊಸ ಯುಗದ ಸೃಷ್ಟಿಯ ಬಯಕೆ ಹೊಂದಿರುವ ಆಸ್ಟ್ರೇಲಿಯಾ ತಂಡದ ಸೀಮಿತ ಓವರ್‌ಗಳ ಪಂದ್ಯಗಳಿಗೆ ಇಬ್ಬರು ನಾಯಕರನ್ನು ನೇಮಿಸಲಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವೇಳೆ ಚೆಂಡು ವಿರೂಪ ಘಟನೆ ಬಳಿಕ ಸ್ಟೀವ್ ಸ್ಮಿತ್ ನಿಷೇಧಕ್ಕೊಳಗಾಗಿ ನಾಯಕತ್ವದಿಂದ ಕೆಳಗೆ ಇಳಿದ ಬಳಿಕ ವಿಕೆಟ್ ಕೀಪರ್ ಟಿಮ್ ಪೈನ್ ಅವರಿಗೆ ತಂಡದ ಸಾರಥ್ಯದ ಹೊಣೆ ವಹಿಸಲಾಗಿತ್ತು.
ಮುಂಬರುವ ಇಂಗ್ಲೆಂಡ್ ಪ್ರವಾಸದ ನಿಗದಿತ ಓವರ್‌ಗಳ ಪಂದ್ಯಗಳಿಗೆ ಇಬ್ಬರು ನಾಯಕರನ್ನು ಕ್ರಿಕೆಟ್ ಆಸ್ಟ್ರೇಲಿಯಾ ಘೋಷಣೆ ಮಾಡಿದೆ. ಏಕದಿನ ಟೂರ್ನಿಗೆ ಟೆಸ್ಟ್ ತಂಡದ ನಾಯಕ ಟಿಮ್ ಪೈನ್ ಅವರೇ ಸಾರಥ್ಯ ವಹಿಸಲಿದ್ದಾರೆ. ಟಿ 20 ಪಂದ್ಯಗಳಿಗೆ ಬಿರುಸಿನ ಆಟದ ಪರಿಣತ ಆರೋನ್ ಫಿಂಚ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಏಕದಿನ ಟೂರ್ನಿಗೆ ಫಿಂಚ್ ಉಪನಾಯಕರಾಗಿರಲಿದ್ದಾರೆ.

ಇಂಗ್ಲೆಂಡ್ ವಿರುದ್ಧ ಏಕೈಕ ಟಿ 20 ಬಳಿಕ ಜಿಂಬಾಬ್ವೆಯಲ್ಲಿ ನಡೆಯಲಿರುವ ಸರಣಿಗೂ ಫಿಂಚ್ ನಾಯಕತ್ವ ಮುಂದುವರಿಯಲಿದೆ. ಈ ಸರಣಿಯಲ್ಲಿ ಪಾಕಿಸ್ತಾನ ಕೂಡ ಪಾಲ್ಗೊಳ್ಳಲಿದೆ.
ಪೈನ್ ಕಾಯಂ ಅಲ್ಲ
ಏಕದಿನ ತಂಡಕ್ಕೂ ಫಿಂಚ್ ಅವರಿಗೇ ನಾಯಕತ್ವ ನೀಡುವ ಉದ್ದೇಶವಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸ್ಥಿರ ಆಟ ಪ್ರದರ್ಶಿಸಿದ್ದ ಪೈನ್ ಅವರಿಗೇ ಹೊಣೆಗಾರಿಕೆ ವಹಿಸಲು ನಿರ್ಧರಿಸಲಾಯಿತು. ಆದರೆ, ಪೈನ್ ಅವರ ಆಯ್ಕೆ ಶಾಶ್ವತವಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆಗಾರ ಟ್ರೆವರ್ ಹೋನ್ಸ್ ಖಚಿತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಅನೇಕ ಹೊಸಮುಖಗಳನ್ನು ಕಾಣಬಹುದು. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಮಿಚೆಲ್ ಮಾರ್ಷ್ ಈ ಸರಣಿಯಲ್ಲಿ ಆಡುತ್ತಿಲ್ಲ.
ಹಿಂದಿರುಗಿನ ಲಿಯಾನ್
ಟೆಸ್ಟ್‌ಗೆ ಸೀಮಿತವಾಗುದ್ದ ನಥಾನ್ ಲಿಯಾನ್, ಎರಡು ವರ್ಷದ ಬಳಿಕ ಏಕದಿನ ತಂಡಕ್ಕೆ ಮರಳಿದ್ದಾರೆ. ಸ್ಪಿನ್-ಆಲ್‌ರೌಂಡರ್ ಆಷ್ಟೊನ್ ಅಗರ್ ಎರಡೂ ವಿಭಾಗಗಳಿಗೆ ಆಯ್ಕೆಯಾಗಿದ್ದಾರೆ. ಭರವಸೆಯ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಟಿ 20 ತಂಡಕ್ಕೆ ಅಚ್ಚರಿಯ ಸೇರ್ಪಡೆಯಾಗಿದ್ದಾರೆ. ಏಕದಿನ ತಂಡದಲ್ಲಿ ಕಾಯಂ ಸ್ಥಾನ ಪಡೆಯುತ್ತಿದ್ದ ಆಡಂ ಜಂಪಾ ಅವರನ್ನು ಕೈಬಿಡಲಾಗಿದೆ.
ದಕ್ಷಿಣ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲೆಕ್ಸ್ ಕಾರಿ ಅವರನ್ನು ಎರಡೂ ತಂಡಗಳಿಗೆ ಆಯ್ಕೆ ಮಾಡಲಾಗಿದೆ. ಹಿರಿಯ ಟೆಸ್ಟ್ ಆಟಗಾರ ಶಾನ್ ಮಾರ್ಷ್ ಅವರಿಗೆ ಏಕದಿನ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಉಸ್ಮಾನ್ ಖವಾಜಾ ಮತ್ತು ಕ್ರಿಸ್ ಲಿನ್ ಅವರಿಗೆ ಸ್ಥಾನ ನೀಡಿಲ್ಲ.
ಬಿಗ್ ಬ್ಯಾಷ್ ಸ್ಟಾರ್ ಡಿ ಆರ್ಸಿ ಶಾರ್ಟ್ ಅವರಿಗೆ ಮೊದಲ ಬಾರಿಗೆ ಏಕದಿನದ ತಂಡದಲ್ಲಿ ಅವಕಾಶ ಸಿಕ್ಕಿದೆ. ಜಾಕ್ ವೈಲ್ಡರ್‌ಮಟ್ ಮತ್ತು ನಿಕ್ ಮ್ಯಾಡಿನ್ಸನ್ ಟಿ 20 ತಂಡದಲ್ಲಿ ಕಾಣಿಸಿಕೊಂಡಿರುವ ಹೊಸ ಮುಖಗಳು.
ತಂಡಗಳು ಹೀಗಿವೆ
ಏಕದಿನ: ಟಿಮ್ ಪೈನ್ (ನಾಯಕ), ಆರೋನ್ ಫಿಂಚ್ (ಉಪನಾಯಕ), ಆಷ್ಟೋನ್ ಅಗರ್, ಅಲೆಕ್ಸ್ ಕಾರಿ, ಜೋಶ್ ಹ್ಯಾಸಲ್‌ವುಡ್, ಟ್ರಾವಿಸ್ ಹೆಡ್, ನಥಾಲ್ ಲಿಯಾನ್, ಗ್ಲೆನ್ ಮ್ಯಾಕ್ಸ್‌ವೆಲ್, ಶಾನ್ ಮಾರ್ಷ್, ಝೀ ರಿಚರ್ಡ್‌ಸನ್, ಕೇನ್ ವಿಲಿಯಮ್ಸನ್, ಡಿ ಆರ್ಸಿ ಶಾರ್ಟ್, ಬಿಲ್ಲಿ ಸ್ಟೇನ್ಲೇಕ್, ಮಾರ್ಕಸ್ ಸ್ಟೋನಿಸ್, ಆಂಡ್ರೂ ಟೈ.
ಟಿ 20: ಆರೋನ್ ಫಿಂಚ್ (ನಾಯಕ), ಅಲೆಕ್ಸ್ ಕಾರಿ (ಉಪನಾಯಕ), ಆಷ್ಟೋನ್ ಅಗರ್, ಟ್ರಾವಿಸ್ ಹೆಡ್, ನಿಕ್ ಮ್ಯಾಡಿನ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಝೀ ರಿಚರ್ಡ್‌ಸನ್, ಡಿ ಆರ್ಸಿ ಶಾರ್ಟ್, ಬಿಲ್ಲಿ ಸ್ಟೇನ್ಲೇಕ್, ಮಾರ್ಕಸ್ ಸ್ಟೋನಿಸ್, ಮಿಷೆಲ್ ಸ್ವೆಪ್ಸನ್, ಆಂಡ್ರೂ ಟೈ, ಜಾಕ್ ವೈಲ್ಡರ್‌ಮಟ್