
ಕರಾಚಿಯ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಆತಿಥೇಯ ಪಾಕಿಸ್ತಾನದ ವಿರುದ್ಧ 79 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1ರಲ್ಲಿ ಸಮವಾಗಿಸಿಕೊಂಡಿದ್ದು, ಕೊನೆಯ ಪಂದ್ಯ ನಿರ್ಣಾಯಕವಾಗಿರಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ 49.5 ಓವರ್ ಗಳಲ್ಲಿ 261 ರನ್‌ಗಳಿಗೆ ಆಲೌಟ್ ಆಯಿತು. ಡಿವೋನ್ ಕಾನ್ವೆ ಮತ್ತು ಕೇನ್ ವಿಲಿಯಮ್ಸನ್ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ಸವಾಲಿನ ಮೊತ್ತ ಪೇರಿಸಿತು.
ಈ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನ ನ್ಯೂಜಿಲೆಂಡ್ ಕರಾರುವಕ್ಕಾದ ಬೌಲಿಂಗ್ ದಾಳಿಗೆ ಸಿಲುಕಿ 43 ಓವರ್ ಗಳಲ್ಲಿ 183 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ 79 ರನ್ ಗಳಿಂದ ಸೋಲನುಭವಿಸಿತು. ನಾಯಕ ಬಾಬರ್ ಅಜಮ್ ಹೊರತುಪಡಿಸಿದರೆ, ಯಾವೊಬ್ಬ ಬ್ಯಾಟರ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ಫಖಾರ್ ಜಮಾನ್ ಶೂನ್ಯಕ್ಕೆ ಔಟಾಗುವ ಮೂಲಕ ಪಾಕಿಸ್ತಾನದ ಪತನ ಆರಂಭವಾಯಿತು. ಇಮಾಮ್ ಉಲ್ ಹಕ್ ಕೂಡ 6 ರನ್ ಗಳಿಸಿ ಔಟಾದರು. ಮೊಹಮ್ಮದ್ ರಿಜ್ವಾನ್ (28), ಹ್ಯಾರಿಸ್ ಸೊಹೈಲ್ (10), ಅಘಾ ಸಲ್ಮಾನ್ (25), ಮೊಹಮ್ಮದ್ ನವಾಜ್ (3), ಉಸ್ಮಾನ್ ಮಿರ್ (12), ಮೊಹಮ್ಮದ್ ವಾಸಿಂ ಜೂನಿಯರ್ (10), ಹ್ಯಾರಿಸ್ ರೌಫ್ ಶೂನ್ಯಕ್ಕೆ ಔಟಾಗುವ ಮೂಲಕ ಪಾಕಿಸ್ತಾನ ಸರ್ವಪತನ ಕಂಡಿತು.

ನ್ಯೂಜಿಲೆಂಡ್ ಅತ್ಯುತ್ತಮ ಬೌಲಿಂಗ್
ನ್ಯೂಜಿಲೆಂಡ್‌ನ ಎಲ್ಲಾ ಬೌಲರ್ ಗಳು ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನದ ಆಟಕ್ಕೆ ಬ್ರೇಕ್ ಹಾಕಿದರು. ಟಿಮ್ ಸೌಥೀ ಮತ್ತು ಇಶ್ ಸೋಧಿ ತಲಾ ಎರಡು ವಿಕೆಟ್ ಪಡೆದು ಮಿಂಚಿದರೆ, ಲೋಕೀ ಫರ್ಗ್ಯೂಸನ್, ಮಿಚೆಲ್ ಸ್ಯಾಂಟ್ನೆರ್, ಮಿಚೆಲ್ ಬ್ರೇಸ್‌ವೆಲ್, ಗ್ಲೆನ್ ಫಿಲಿಪ್ಸ್ ತಲಾ ಒಂದು ವಿಕೆಟ್ ಪಡೆದರು.

ಡಿವೋನ್ ಕಾನ್ವೆ ಶತಕದ ನೆರವು
ಆರಂಭಿಕ ಆಟಗಾರ ಫಿನ್ ಅಲೆನ್ ಕೇವಲ 1 ರನ್ ಗಳಿಸಿ ಔಟಾದ ನಂತರ, ಡಿವೋನ್ ಕಾನ್ವೆ ಮತ್ತು ಕೇನ್ ವಿಲಿಯಮ್ಸನ್ ತಂಡಕ್ಕೆ ಆಸರೆಯಾದರು. ಡಿವೋನ್ ಕಾನ್ವೆ 92 ಎಸೆತಗಳಲ್ಲಿ 13 ಬೌಂಡರಿ ಒಂದು ಸಿಕ್ಸರ್ ಸಹಿತ 101 ರನ್ ಗಳಿಸಿ ಮಿಂಚಿದರು. ನಾಯಕನ ಆಟವಾಡಿದ ಕೇನ್ ವಿಲಿಯಮ್ಸನ್ 100 ಎಸೆತಗಳಲ್ಲಿ 85 ರನ್ ಗಳಿಸಿದರು. ಮಿಚೆಲ್ ಸ್ಯಾಂಟ್ನರ್ ಮಾತ್ರ 40 ಎಸೆತಗಳಲ್ಲಿ 37 ರನ್ ಗಳಿಸಿ ತಂಡ ಸವಾಲಿನ ಮೊತ್ತ ಕಲೆಹಾಕಲು ಸಹಾಯಕವಾದರು. ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ದಾಟಲಿಲ್ಲ. ಫಿನ್ ಅಲೆನ್ 1 ರನ್ ಗಳಿಸಿ ಔಟಾದರು, ಡೇರಿಲ್ ಮಿಚೆಲ್ 5 ರನ್ ಗಳಿಸಿ ನಿರಾಸೆ ಮೂಡಿಸಿದರು. ಟಾಮ್ ಲಥಮ್ (2), ಗ್ಲೆನ್ ಫಿಲಿಪ್ಸ್ (3), ಮಿಚೆಲ್ ಬ್ರಾಸ್‌ವೆಲ್ (8), ಇಶ್ ಸೋಧಿ (7), ಟಿಮ್ ಸೌಥೀ (0) ರನ್ ಗಳಿಸಿದರು.
ನಸೀಮ್ ಶಾ 8.5 ಓವರ್ ಗಳಲ್ಲಿ 58 ರನ್ ಗಳಿಸಿ 3 ವಿಕೆಟ್ ಗಳಿಸಿದರು. ಮೊಹಮ್ಮದ್ ನವಾಜ್ 10 ಓವರ್ ಗಳಲ್ಲಿ 38 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಹ್ಯಾರಿಸ್ ರೌಫ್ ಮತ್ತು ಉಸ್ಮಾನ್ ಮಿರ್ ತಲಾ ಒಂದು ವಿಕೆಟ್ ಪಡೆದರು.
ಉಭಯ ತಂಡಗಳ ಆಡುವ ಬಳಗ
ಪಾಕಿಸ್ತಾನ : ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಹಾರಿಸ್ ಸೊಹೈಲ್, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಹರಿಸ್ ರೌಫ್
ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಲಾಕಿ ಫರ್ಗುಸನ್