
ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯ ಕರಾಚಿಯ ನ್ಯಾಶನಲ್ ಸ್ಟೇಡಿಯಂನಲ್ಲಿ ಆರಂಭವಾಗಿದೆ. ಮೊದಲ ದಿನದಾಟದಲ್ಲಿ ನ್ಯೂಜಿಲೆಂಡ್ ಭರ್ಜರಿ ಪ್ರದರ್ಶನ ನೀಡಿದ್ದು ಆರಂಭಿಕ ಆಟಗಾರರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಉತ್ತಮ ಮೊತ್ತದತ್ತ ಹೆಜ್ಜೆಯಿಟ್ಟಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡಕ್ಕೆ ಅದ್ಭುತ ಆರಂಬ ದೊರೆತಿದೆ. ಟಾಮ್ ಲಾಥಮ್ ಹಾಗೂ ಡೆವೋನ್ ಕಾನ್ವೆ ಜೋಡಿ ಮೊದಲ ವಿಕೆಟ್‌ಗೆ 134 ರನ್‌ಗಳ ಕೊಡುಗೆ ನೀಡಿದರು. ಟಾಮ್ ಲಾಥಮ್ 71 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಮತ್ತೊಂದು ತುದಿಯಲ್ಲಿದ್ದ ಡೆವೋನ್ ಕಾನ್ವೆ ಅಮೋಘ ಬ್ಯಾಟಿಂಗ್ ಮುಂದುವರಿಸಿದ್ದು ಭರ್ಜರಿ ಶತಕ ಸಿಡಿಸಿದರು. 2ನೇ ವಿಕೆಟ್‌ಗೆ ಕೇನ್ ವಿಲಿಯಮ್ಸನ್ ಜೊತೆಗೆ ಭರ್ಜರಿ 100 ರನ್‌ಗಳ ಜೊತೆಯಾಟ ನೀಡಿದ ಬಳಿಕ ಕಾನ್ವೆ 122 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು.
ಕಾನ್ವೆ ವಿಕೆಟ್ ಕಳೆದುಕೊಂಡ ಬಳಿಕ ಪಾಕಿಸ್ತಾನದ ಬೌಲಿಂಗ್ ವಿಭಾಗ ಪಂದ್ಯ ಯಶಸ್ಸು ಸಾಧಿಸುವಲ್ಲಿ ಯಶಸ್ವಿಯಾಯಿತು. ಕೇನ್ ವಿಲಿಯಮ್ಸನ್ 36 ರನ್‌ಗಳಿಸಿ ನಸೀಮ್ ಶಾಗೆ ವಿಕೆಟ್ ಒಪ್ಪಿಸಿದರೆ, ಡ್ಯಾರೆಲ್ ಮಿಚೆಲ್ 3 ರನ್‌ಗಳಿಸಿ ಔಟಾದರು. ಅದಾದ ಬಳಿಕ ಹೆನ್ರಿ ನಿಕೋಲಸ್ ಹಾಗೂ ಮೈಕಲ್ ಬ್ರೇಸ್ವೆಲ್ ಕೂಡ ವಿಕೆಟ್ ಕಳೆದುಕೊಂಡರು. ಈ ಮೂಲಕ 279 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು ನ್ಯೂಜಿಲೆಂಡ್.
ಸದ್ಯ ಟಾಮ್ ಬ್ಲಂಡೆಲ್ ಹಾಗೂ ಇಶ್ ಸೋಧಿ ಕ್ರೀಸ್‌ನಲ್ಲಿದ್ದು ಮತ್ತೆ ಚೇತರಿಕೆಯ ವಿಶ್ವಾಸ ಮೂಡಿಸಿದ್ದಾರೆ. ಅಂತಿಮವಾಗಿ ಮೊದಲ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 6 ವಿಕೆಟ್ ಕಳೆದುಕೊಂಡು 309 ರನ್‌ಗಳಿಸಿದೆ. ಪಾಕಿಸ್ತಾನದ ಪರವಾಗಿ ಅಘಾ ಸಲ್ಮಾನ್ 3 ವಿಕೆಟ್ ಪಡೆದರೆ ನಸೀಮ್ ಶಾ 2 ವಿಕೆಟ್ ಕಬಳಿಸಿದ್ದಾರೆ. ಒಂದು ವಿಕೆಟ್ ಅಬ್ರಾರ್ ಅಹ್ಮದ್ ಪಾಲಾಗಿದೆ.
ಪಾಕಿಸ್ತಾನ ಆಡುವ ಬಳಗ; ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಶಾನ್ ಮಸೂದ್, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಅಘಾ ಸಲ್ಮಾನ್,
ಹಸನ್ ಅಲಿ, ನಸೀಮ್ ಶಾ, ಮೀರ್ ಹಮ್ಜಾ, ಅಬ್ರಾರ್ ಅಹ್ಮದ್
ಬೆಂಚ್: ನೌಮನ್ ಅಲಿ, ಮೊಹಮ್ಮದ್ ವಾಸಿಂ ಜೂನಿಯರ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಕಮ್ರಾನ್ ಗುಲಾಮ್, ಜಾಹಿದ್ ಮಹಮೂದ್, ಶಹನವಾಜ್ ದಹಾನಿ,
ಸಾಜಿದ್ ಖಾನ್
ನ್ಯೂಜಿಲೆಂಡ್ ಆಡುವ ಬಳಗ: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್,
ಇಶ್ ಸೋಧಿ, ಟಿಮ್ ಸೌಥಿ (ನಾಯಕ), ಮ್ಯಾಟ್ ಹೆನ್ರಿ, ಅಜಾಜ್ ಪಟೇಲ್
ಬೆಂಚ್: ನೀಲ್ ವ್ಯಾಗ್ನರ್, ಬ್ಲೇರ್ ಟಿಕ್ನರ್, ಗ್ಲೆನ್ ಫಿಲಿಪ್ಸ್, ವಿಲ್ ಯಂಗ್