World Cup 2023: ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನದ ಸೋಲಿಗೆ 'ಕೆಟ್ಟ ಅಂಪೈರಿಂಗ್' ಕಾರಣವೆಂದ ಭಜ್ಜಿ
ಶುಕ್ರವಾರ, ಅಕ್ಟೋಬರ್ 27ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿಏಕದಿನ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಒಂದು ವಿಕೆಟ್‌ನಿಂದ ರೋಚಕವಾಗಿ ಸೋಲುವ ಮೂಲಕ ಪಾಕಿಸ್ತಾನ ತಂಡವು ಸತತ ನಾಲ್ಕನೇ ಬಾರಿಗೆ ಮುಖಭಂಗ ಅನುಭವಿಸಿತು.
ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ ಹ್ಯಾರಿಸ್ ರೌಫ್ ಅವರ ಎಸೆತವು ಲೆಗ್ ಸ್ಟಂಪ್‌ಗೆ ಬಡಿಯುತ್ತಿದೆ ಎಂದು ಮರು ವೀಕ್ಷಣೆಗಳು ತೋರಿಸಿದಾಗ, ಕೊನೆಯ ಬ್ಯಾಟರ್ ತಬ್ರೈಜ್ ಶಮ್ಸಿ ಅವರನ್ನು ಅಂಪೈರ್ ಎಲ್‌ಬಿಡಬ್ಲ್ಯು ಔಟ್ ನೀಡಲಿಲ್ಲ ಎಂದು ಪಾಕಿಸ್ತಾನದ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

ಅಂಪೈರ್ ಅದನ್ನು ನಾಟೌಟ್ ನೀಡಿದ್ದರಿಂದ, ಪಾಕಿಸ್ತಾನ ತಂಡದ ರಿವ್ಯೂ ಕೂಡ ಅಂಪೈರ್ ನಿರ್ಧಾರವನ್ನು ರದ್ದುಗೊಳಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಅದನ್ನು 'ಅಂಪೈರ್ಸ್ ಕಾಲ್' ಎಂದು ತೋರಿಸಿತು.
ಇದಕ್ಕೆ ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ 'ಕೆಟ್ಟ ಅಂಪೈರಿಂಗ್' ಎಂದು ಕರೆದರು ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನದ ಒಂದು ವಿಕೆಟ್ ಸೋಲಿಗೆ ಇದು ಕಾರಣವಾಗಿದೆ ಎಂದರು.
"ಕೆಟ್ಟ ಅಂಪೈರಿಂಗ್ ಮತ್ತು ಕೆಟ್ಟ ನಿಯಮಗಳು ಪಾಕಿಸ್ತಾನ ತಂಡದ ಈ ಫಲಿತಾಂಶಕ್ಕೆ ಕಾರಣವಾಗುತ್ತವೆ," ಎಂದು ಹರ್ಭಜನ್ ಸಿಂಗ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

"ಐಸಿಸಿ ಈ ನಿಯಮವನ್ನು ಬದಲಾಯಿಸಬೇಕು. ಚೆಂಡು ಸ್ಟಂಪ್‌ಗೆ ಬಡಿಯುತ್ತಿದ್ದರೆ, ಅಂಪೈರ್ ಔಟ್ ನೀಡಿದ್ದಾರೋ ಇಲ್ಲವೋ ಎಂಬುದು ಮುಖ್ಯವಲ್ಲ. ಅದು ಔಟ್ ಎಂಬ ತೀರ್ಮಾನಕ್ಕೆ ಬರಬೇಕು. ಇಲ್ಲದಿದ್ದರೆ ತಂತ್ರಜ್ಞಾನದ ಉಪಯೋಗವೇನು?," ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರು ತಮ್ಮ ಮಕ್ಕಳೊಂದಿಗೆ ಪ್ರೇಕ್ಷಕರಾಗಿ ಚೆನ್ನೈನಲ್ಲಿ ಹಾಜರಿದ್ದರು. ಹರ್ಭಜನ್ ಸಿಂಗ್ ಅವರ "ಕಳಪೆ ಅಂಪೈರಿಂಗ್' ಹೇಳಿಕೆಗೆ ಒಪ್ಪಿಗೆ ಸೂಚಿಸಿದರು. ಆದರೆ, ದಕ್ಷಿಣ ಆಫ್ರಿಕಾ ಬ್ಯಾಟರ್ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಅವರನ್ನು ಆ ಸಂದರ್ಭದಲ್ಲಿ "ನಾಟೌಟ್' ನೀಡಬೇಕಾಗಿತ್ತು ಎಂದು ಪ್ರತಿಕ್ರಿಯಿಸಿದರು.
"ಹರ್ಭಜನ ಸಿಂಗ್, ಅಂಪೈರ್‌ಗಳ ನಿರ್ಧಾರದಲ್ಲಿ ನಾನು ನಿಮ್ಮಂತೆಯೇ ಭಾವಿಸುತ್ತೇನೆ. ಆದರೆ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ವಿಕೆಟ್ ವಿಚಾರದಲ್ಲಿ ದಕ್ಷಿಣ ಆಫ್ರಿಕಾ ಅದೇ ಭಾವನೆಯನ್ನು ಹೊಂದಬಹುದಲ್ಲವೇ?," ಎಂದು ಗ್ರೇಮ್ ಸ್ಮಿತ್ ಟ್ವೀಟ್ ಮಾಡಿದ್ದಾರೆ.
ಪಂದ್ಯದ ನಂತರ, ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರು ಅಂಪೈರ್‌ಗಳನ್ನು ದೂಷಿಸಲು ನಿರಾಕರಿಸಿದರು ಮತ್ತು ಇದು "ಆಟದ ಭಾಗ' ಎಂದು ಹೇಳಿದರು.
"ಇದು ಆಟದ ಭಾಗವಾಗಿದೆ, ಇದು ಅಂಪೈರ್ಸ್ ಕಾಲ್ ಆದ್ದರಿಂದ ಇದು ಕೇವಲ ಆಟದ ಭಾಗವಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ಎಲ್ಲರಿಗೂ ನಿರಾಶೆ ತಂದಿದೆ, ಈ ಪಂದ್ಯವನ್ನು ಗೆಲ್ಲಲು ಮತ್ತು ಪಂದ್ಯಾವಳಿಯಲ್ಲಿ ಉಳಿಯಲು ನಮಗೆ ಅವಕಾಶವಿತ್ತು ಆದರೆ ನಾವು ಅದನ್ನು ಕಳೆದುಕೊಂಡಿದ್ದೇವೆ," ಎಂದು ಬಾಬರ್ ಅಜಂ ತಿಳಿಸಿದರು.
"ನಾವು ನಮ್ಮ ಮುಂದಿನ ಮೂರು ಪಂದ್ಯಗಳಲ್ಲಿ ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತೇವೆ. ಮೂರು ಪಂದ್ಯಗಳ ನಂತರ ನಾವು ಎಲ್ಲಿ ನಿಲ್ಲುತ್ತೇವೆ ಎಂದು ನೋಡೋಣ," ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಪಂದ್ಯದ ನಂತರ ಅಭಿಪ್ರಾಯಪಟ್ಟರು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 46.4 ಓವರ್‌ಗಳಲ್ಲಿ 270 ರನ್‌ಗಳಿಗೆ ಸರ್ವಪತನ ಕಂಡಿತು ಮತ್ತು ನಿಗದಿತ ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲವಾಯಿತು. ಚೆನ್ನೈ ಪಿಚ್‌ನಲ್ಲಿ ಪಾಕಿಸ್ತಾನ ತಂಡವು ಉತ್ತಮ ಗುರಿಗಿಂತ 10-15 ರನ್ ಕಡಿಮೆ ಗಳಿಸಿದೆವು ಎಂದು ಬಾಬರ್ ಅಜಂ ಒಪ್ಪಿಕೊಂಡರು.
ಪಾಕಿಸ್ತಾನ ತಂಡದ ವೇಗಿಗಳಾದ ಶಾಹೀನ್ ಶಾ ಅಫ್ರಿದಿ 45 ರನ್ ನೀಡಿ 3 ವಿಕೆಟ್ ಮತ್ತು ಮೊಹಮ್ಮದ್ ವಾಸಿಮ್ ಜೂನಿಯರ್ 50 ರನ್ ನೀಡಿ 2 ವಿಕೆಟ್ ಪಡೆದು ಪಾಕಿಸ್ತಾನ ತಂಡದ ಹೋರಾಟಕ್ಕೆ ಕೈಜೋಡಿಸಿದರು. ಆದರೆ, ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಅವರು ಎದುರಿಸಿದ 21ನೇ ಎಸೆತದಲ್ಲಿ ಗೆಲುವಿನ ಬೌಂಡರಿ ಬಾರಿಸಿ ಪಾಕಿಸ್ತಾನ ತಂಡಕ್ಕೆ ನಿರಾಸೆ ಮೂಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications