ಮುಂಬರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವನ್ನು ಶನಿವಾರ, ಜೂನ್ 17ರಂದು ಪ್ರಕಟಿಸಲಾಗಿದೆ.
ಇದೇ ವೇಳೆ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಹೊಸ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (2023-25) ಚಕ್ರಕ್ಕೆ ಪಾಕಿಸ್ತಾನ ತಂಡ ತನ್ನ ಮೊದಲ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಕಳೆದ ವರ್ಷ ಮೊಣಕಾಲಿನ ಗಾಯದಿಂದಾಗಿ ಶಾಹೀನ್ ಶಾ ಅಫ್ರಿದಿ ಪಾಕಿಸ್ತಾನ ತಂಡದ ಇಡೀ ತವರಿನ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಪಾಕಿಸ್ತಾನ್ ಸೂಪರ್ ಲೀಗ್‌ನ ಕೊನೆಯ ಋತುವಿನಲ್ಲಿ ಮುಲ್ತಾನ್ ಸುಲ್ತಾನ್ ತಂಡವನ್ನು ಸೋಲಿಸಿದ ಶಾಹೀನ್ ಶಾ ಅಫ್ರಿದಿ ಲಾಹೋರ್ ಖಲಂದರ್ಸ್ ತಂಡವನ್ನು ವಿಜಯದತ್ತ ಮುನ್ನಡೆಸಿದರು.
ಇನ್ನು ಮಾರಕ ವೇಗಿ ಶಾಹೀನ್ ಅಫ್ರಿದಿ ಟೆಸ್ಟ್ ಕ್ರಿಕೆಟ್ ಸ್ವರೂಪಕ್ಕೆ ಮರಳುವುದರಿಂದ, ಪಾಕಿಸ್ತಾನ ತಂಡ ಮತ್ತೊಮ್ಮೆ ಪಾಯಿಂಟ್ ಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆಯಲು ಎದುರು ನೋಡುತ್ತಿದೆ.

ಶ್ರೀಲಂಕಾ ಪ್ರವಾಸಕ್ಕಾಗಿ ಪಾಕಿಸ್ತಾನ ತಂಡವು ಬ್ಯಾಟ್ಸ್‌ಮನ್‌ಗಳಾದ ಮೊಹಮ್ಮದ್ ಹುರೈರಾ ಮತ್ತು ಆಲ್‌ರೌಂಡರ್ ಅಮರ್ ಜಮಾಲ್ ಅವರನ್ನು ಆಯ್ಕೆ ಮಾಡಿದೆ. ಈ ಇಬ್ಬರೂ ರಾಷ್ಟ್ರೀಯ ತಂಡದಿಂದ ತಮ್ಮ ಮೊದಲ ಕರೆ ಸ್ವೀಕರಿಸಿದ್ದಾರೆ.
ಇದೇ ವೇಳೆ ಆರು ತಿಂಗಳ ಒಪ್ಪಂದದ ಮೇರೆಗೆ, ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೋರ್ನೆ ಮೊರ್ಕೆಲ್ ಅವರನ್ನು ಪಾಕಿಸ್ತಾನ ತಂಡದ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ.
ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿದ ಒಂದು ವರ್ಷದ ನಂತರ 16 ಸದಸ್ಯರ ಪಾಕಿಸ್ತಾನ ತಂಡದಲ್ಲಿ ಆಯ್ಕೆಯಾದ ನಂತರ ಶಾಹೀನ್ ಶಾ ಅಫ್ರಿದಿ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿದಿದ್ದೆ ಮತ್ತು ಈ ಮಾದರಿಯ ಕ್ರಿಕೆಟ್‌ನಿಂದ ದೂರವಿರುವುದು ನನಗೆ ಕಷ್ಟಕರವಾಗಿದೆ ಎಂದು ಅಫ್ರಿದಿ ಹೇಳಿದ್ದಾರೆ. ಶ್ರೀಲಂಕಾ ದೇಶದಲ್ಲಿ ಪ್ರಭಾವಿ ಪ್ರದರ್ಶನದೊಂದಿಗೆ ಪುನರಾಗಮನ ಮಾಡಲು ಮತ್ತು ಟೆಸ್ಟ್ ಸ್ವರೂಪದಲ್ಲಿ ನೂರು ವಿಕೆಟ್‌ಗಳ ಸಾಧನೆಯನ್ನು ಪೂರ್ಣಗೊಳಿಸಲು ಉತ್ಸುಕನಾಗಿದ್ದೇನೆ ಎಂದು ಬಲಗೈ ವೇಗಿ ಹೇಳಿದರು.
"ಒಂದು ವರ್ಷದ ನಂತರ ಪಾಕಿಸ್ತಾನ ಟೆಸ್ಟ್ ತಂಡಕ್ಕೆ ಮರಳಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಾನು ಟೆಸ್ಟ್ ಕ್ರಿಕೆಟ್‌ನಿಂದ ದೂರವಿದ್ದೆ ಮತ್ತು ಈ ಸ್ವರೂಪದಿಂದ ದೂರವಿರುವುದು ನನಗೆ ಕಠಿಣವಾಗಿತ್ತು. ಗಾಯದ ಕಾರಣ ನಮ್ಮ ಸಂಪೂರ್ಣ ತವರಿನ ಋತುವನ್ನು ಕಳೆದುಕೊಂಡೆ. ನಂತರ ನಾನು ಶ್ರೀಲಂಕಾದಲ್ಲಿ ಗಾಯಕ್ಕೆ ತುತ್ತಾದೆ. ಇದೀಗ ನಾನು ಅದೇ ಶ್ರೀಲಂಕಾದಲ್ಲಿ ಪರಿಣಾಮಕಾರಿ ಪುನರಾಗಮನ ಮಾಡಲು ಉತ್ಸುಕನಾಗಿದ್ದೇನೆ," ಎಂದು ಶಾಹೀನ್ ಶಾ ಅಫ್ರಿದಿ ತಿಳಿಸಿದ್ದಾರೆ.
"ಕಠಿಣ ಸಮಯದಲ್ಲಿ ನನಗೆ ಬೆಂಬಲ ನೀಡಿದ ನನ್ನ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮುಂಬರುವ ಸವಾಲುಗಳಿಗೆ ನಾನು ಸಿದ್ಧನಿದ್ದೇನೆ," ಎಂದು ಶಾಹೀನ್ ಶಾ ಅಫ್ರಿದಿ ಇಎಸ್‌ಪಿಎನ್ ಕ್ರಿಕ್‌ಇನ್‌ಫೋಗೆ ಹೇಳಿದ್ದಾರೆ.
ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ಉಪ ನಾಯಕ/ ವಿಕೆಟ್ ಕೀಪರ್), ಅಮರ್ ಜಮಾಲ್, ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಹಸನ್ ಅಲಿ, ಇಮಾಮ್-ಉಲ್-ಹಕ್, ಮೊಹಮ್ಮದ್ ಹುರೈರಾ, ಮೊಹಮ್ಮದ್ ನವಾಜ್, ನಸೀಮ್ ಶಾ, ನೋಮನ್ ಅಲಿ, ಸಲ್ಮಾನ್ ಅಲಿ ಅಘಾ, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಸೌದ್ ಶಕೀಲ್, ಶಾಹೀನ್ ಶಾ ಅಫ್ರಿದಿ, ಶಾನ್ ಮಸೂದ್.