ಪಾಕಿಸ್ತಾನದ ಬ್ಯಾಟರ್‌ಗೆ ಇಂಗ್ಲೆಂಡ್‌ನಲ್ಲಿ ಸಂಕಷ್ಟ ಎದುರಾಗಿದೆ. ಯುವ ಬ್ಯಾಟರ್ ಹೈದರ್ ಅಲಿ ಅತ್ಯಾಚಾರ ಆರೋಪದ ಮೇಲೆ ಬಂಧಿಸಲಾಗಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್ 3 ರಂದು ನಡೆದಿದ್ದ ಆರೋಪದಡಿ ಇವರನ್ನು ಬಂಧಿಸಲಾಗಿದೆ. ಇವರನ್ನು ಬಂಧಿಸಿರುವ ಸುದ್ದಿಯನ್ನು ಮಾಧ್ಯಮಗಳು ಖಚಿತ ಪಡಿಸಿವೆ. ಇವರು ಪಾಕಿಸ್ತಾನ "ಎ" ತಂಡದ ಭಾಗವಾಗಿದ್ದರು.
ಹೈದರ್ ಅಲಿ ಆಗಸ್ಟ್ 3 ರಂದು ಕ್ಯಾಂಟರ್ಬರಿ ಮೈದಾನದಲ್ಲಿ ಪಂದ್ಯ ಆಡುತ್ತಿದ್ದರು. ಇದಾದ ಬಳಿಕ ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಅವರನ್ನು ಮೈದಾನದಿಂದಲೇ ಬಂಧಿಸಿದರು. ಆದರೆ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. ಅಲ್ಲದೆ ದೇಶದಿಂದ ಹೊರ ಹೋಗದಂತೆ ನಿರ್ಭಂದ ಹೇರಲಾಗಿದೆ. ಯುವ ಬ್ಯಾಟರ್ ಹೈದರ್ ಅಲಿ ಪಾಸ್‌ಪೋರ್ಟ್ ಅನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮೂಲಗಳ ಪ್ರಕಾರ ಹೈದರ್ ಅಲಿ ವಿರುದ್ಧ ಅತ್ಯಾಚಾರದ ಆರೋಪವನ್ನು ಮಾಡಿದ ಮಹಿಳೆ ಪಾಕಿಸ್ತಾನದ ಮೂಲದವಳು ಎಂದು ತಿಳಿದು ಬಂದಿದೆ. ಯುವ ಆಟಗಾರನನ್ನು ಪಾಕ್ ಕ್ರಿಕೆಟ್ ಮಂಡಳಿ ಸದ್ಯ ಅಮಾನತ್ತು ಮಾಡಿದೆ.

ಪಾಕಿಸ್ತಾನ ಎ ತಂಡದ ಭಾಗವಾಗಿರುವ ಹೈದರ್ ಅಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಆಡುತ್ತಿದ್ದಾರೆ. ಇವರು ಅತ್ಯಾಚಾರ ಆರೋಪದಡಿ ಮ್ಯಾಂಚೆಸ್ಟರ್ ಪೊಲೀಸರು ಬಂಧಿಸಿದ್ದು, ರಾಯಿಟರ್ಸ್‌ಗೆ ಇಮೇಲ್ ಮೂಲಕ ತಿಳಿಸಿದೆ.
ಹೈದರ್ ಅಲಿ ಅಕ್ಟೋಬರ್ 2, 2000 ರಂದು ಪಾಕಿಸ್ತಾನದ ಪಂಜಾಬ್‌ನಲ್ಲಿ ಜನಿಸಿದರು. ಹೈದರ್ ಅಲಿ ಸೆಪ್ಟೆಂಬರ್ 2019 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು ಮತ್ತು ಸೆಪ್ಟೆಂಬರ್ 1, 2020 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇವರು ಈಗಾಗಲೇ ಪಾಕ್ ಪರ ಏಕದಿನ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿ ಸೈ ಎನಿಸಿಕೊಂಡಿದ್ದಾರೆ. ಈ ವೇಳೆ ಇವರು ಭಾರತದ ವಿರುದ್ಧ ಬ್ಯಾಟ್ ಮಾಡಿದ್ದಾರೆ. ಹೈದರ್ ಅಲಿ 2023 ರಲ್ಲಿ ಇಂಗ್ಲೆಂಡ್‌ನ ಕೌಂಟಿ ಕ್ಲಬ್ ಡರ್ಬಿಶೈರ್‌ನಲ್ಲಿ ಆಡಿದ್ದಾರೆ.
ಹೈದರ್ ಅಲಿ ಪಾಕ್ ಪರ 2 ಏಕದಿನ ಪಂದ್ಯ ಆಡಿದ್ದು 42 ರನ್ ಬಾರಿಸಿದ್ದಾರೆ. ಅಲ್ಲದೆ 35 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ 32 ಇನ್ನಿಂಗ್ಸ್‌ಗಳಲ್ಲಿ 124.69 ಸ್ಟ್ರೈಕ್ ರೇಟ್‌ನಲ್ಲಿ 505 ರನ್ ಕಲೆ ಹಾಕಿದ್ದಾರೆ.