Asia Cup T20: ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಫೈಟ್
ದುಬೈ: ಏಷ್ಯಾ ಕಪ್ ಟಿ20 ಟೂರ್ನಿಯ ಸೂಪರ್ 4 ಹಂತದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ಸಂಘಟಿತ ಆಟದ ಪ್ರದರ್ಶನ ನೀಡಿ ಬಾಂಗ್ಲಾದೇಶ ತಂಡವನ್ನು ಮಣಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ. ಗುರುವಾರ ನಡೆದ ಪಂದ್ಯದಲ್ಲಿ ಪಾಕ್ 11 ರನ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿತು. ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿತ್ತು. ಆದರೆ ಈ ಪಂದ್ಯದಲ್ಲಿ ಪಾಕ್ ಭರ್ಜರಿ ಪ್ರದರ್ಶನ ನೀಡಿ ಗೆಲುವು ಸಾಧಿಸಿತು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕ್ ತಂಡಗಳು ಏಷ್ಯಾ ಕಪ್ ಟಿ20 ಟೂರ್ನಿಯ ಫೈನಲ್‌ನಲ್ಲಿ ಫೈಟ್ ನಡೆಸಲಿವೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ಪ್ರದರ್ಶನ ನೀಡಬೇಕಿದ್ದ ಪಾಕ್ ಮೊದಲ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 27 ರನ್ ಸೇರಿಸಿತು. ಆ ಬಳಿಕವೂ ಪಾಕ್ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಪರಿಣಾಮ 10.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 49 ರನ್ ಸೇರಿಸಿತು. ಆರನೇ ವಿಕೆಟ್‌ಗೆ ಶಾಹಿನ್ ಶಾ ಆಫ್ರಿದಿ (19) ಹಾಗೂ ಮೊಹಮ್ಮದ್ ಹ್ಯಾರೀಸ್ ಜೋಡಿ 16 ಎಸೆತಗಳಲ್ಲಿ 22 ರನ್ ಸೇರಿಸಿತು.

7ನೇ ವಿಕೆಟ್‌ಗೆ ಮೊಹಮ್ಮದ್ ಹ್ಯಾರೀಸ್ ಹಾಗೂ ಮೊಹಮ್ಮದ್ ನವಾಜ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 24 ಎಸೆತಗಳಲ್ಲಿ 38 ರನ್ ಸೇರಿಸಿತು. ಮೊಹಮ್ಮದ್ ಹ್ಯಾರೀಸ್ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 31 ರನ್ ಬಾರಿಸಿ ಔಟ್ ಆದರು. ಮೊಹಮ್ಮದ್ ನವಾಜ್ 25 ರನ್ ಸಿಡಿಸಿದರು. ಫಹೀನ್ ಅಶ್ರಫ್ (ಅಜೇಯ 14) ತಂಡದ ಮೊತ್ತ ಹಿಗ್ಗಿಸುವಲ್ಲಿ ಶ್ರಮಿಸಿದರು. ಅಂತಿಮವಾಗಿ ಪಾಕ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 135 ರನ್ ಸೇರಿಸಿತು.
ಬಾಂಗ್ಲಾದೇಶದ ಪರ ತಸ್ಕೀನ್ ಅಹ್ಮದ್ 3, ಮೆಹದಿ ಹಸನ್, ರಿಶದ್ ಹುಸೇನ್ ತಲಾ 2 ವಿಕೆಟ್ ಕಬಳಿಸಿದರು.
ಕಳಪೆ ಆರಂಭ
ಗುರಿಯನ್ನು ಹಿಂಬಾಲಿಸಿದ ಬಾಂಗ್ಲಾದೇಶ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ಪರ್ವೇಜ್ ಹೊಸೈನ್ ಎಮಾನ್ (0) ಹಾಗೂ ಮೂರನೇ ಕ್ರಮಾಂಕದಲ್ಲಿ ತೌಹಿದ್ ಹೃದಯೊಯ್ (5) ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕ ಸೈಫ್ ಹಸನ್ 1 ಬೌಂಡರಿ, 2 ಸಿಕ್ಸರ್ ನೆರವಿನಿಂದ 18 ರನ್ ಬಾರಿಸಿ ಔಟ್ ಆದರು. ಬಾಂಗ್ಲಾದೇಶ ಪವರ್ ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಮಧ್ಯಮ ಕ್ರಮಾಂಕದಲ್ಲಿ ಮೆಹದಿ ಹಸನ್ (11), ನುರುಲ್ ಹಸನ್ (16) ಸಹ ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಶಮೀಮ್ ಹೊಸೇನ್ 2 ಸಿಕ್ಸರ್ ಸಹಾಯದಿಂದ 30 ರನ್ ಬಾರಿಸಿ ಔಟ್ ಆದರು.ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಪಾಕಿಸ್ತಾನ ತಂಡದ ಪರ ವೇಗದ ಬೌಲರ್ ಶಾಹಿನ್ ಶಾ ಆಫ್ರಿದಿ, ಹ್ಯಾರೀಸ್ ರೌಫ್ ತಲಾ ಮೂರು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications