ಪಲ್ಲೆಕೆಲೆ: ಭರವಸೆಯ ಆಟಗಾರ ಸಾಹಿಬ್‌ಜಾದ ಫರ್ಹಾನ್ ಬಾರಿಸಿದ ಭರ್ಜರಿ ಶತಕ ಹಾಗೂ ಫಖರ್ ಜಮಾನ್ ಅವರು ಬಾರಿಸಿದ ಅರ್ಧಶತಕದ ಬಲದಿಂದ ಪಾಕಿಸ್ತಾನ ಟಿ20 ವಿಶ್ವಕಪ್ ಸೂಪರ್ 8 ಹಂತದ ಪಂದ್ಯದಲ್ಲಿ 5 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ದಾಖಲಿಸಿದರೂ, ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಕೈ ಚೆಲ್ಲಿದೆ. ಈ ಪಂದ್ಯವನ್ನು ಗಮನಿಸುತ್ತಿದ್ದ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ.
ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ 213 ರನ್‌ಗಳ ಗುರಿಯನ್ನು ಶ್ರೀಲಂಕಾ ತಂಡಕ್ಕೆ ನೀಡಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ 147 ರನ್‌ಗಳಿಗೆ ಕಟ್ಟಿಹಾಕಬೇಕಿತ್ತು. ಅಂದಾಗ ಮಾತ್ರ ಪಾಕ್ ರನ್ ರೇಟ್ ನ್ಯೂಜಿಲೆಂಡ್ ಅವರಿಗಿಂತ ಹೆಚ್ಚಾಗುತ್ತಿತ್ತು. ಶ್ರೀಲಂಕಾ 147ಕ್ಕಿಂತ ಹೆಚ್ಚು ರನ್ ಗಳಿಸಿದ್ದು, ಪಾಕಿಸ್ತಾನದ ಸೆಮಿಫೈನಲ್ ಆಸೆಗೆ ಕೊಳ್ಳಿ ಇಟ್ಟಿತು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಸಾಹಿಬ್‌ಜಾದ ಫರ್ಹಾನ್ ಮತ್ತು ಫಖರ್ ಜಮಾನ್ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿಹಾಕುವಲ್ಲಿ ಲಂಕಾ ಬೌಲರ್‌ಗಳು ವಿಫಲರಾದರು. ಈ ಜೋಡಿ 15.5 ಓವರ್‌ಗಳಲ್ಲಿ 176 ರನ್ ಸಿಡಿಸಿತು. ಈ ಅವಧಿಯಲ್ಲಿ ಫಖರ್ ಜಮಾನ್ 9 ಬೌಂಡರಿ, 4 ಸಿಕ್ಸರ್ ಸಹಾಯದಿಂದ 84 ರನ್ ಬಾರಿಸಿ ಔಟ್ ಆದರು. ಈ ವೇಳೆ ಇವರ ಸ್ಟ್ರೈಕ್ ರೇಟ್ 200 ಆಗಿತ್ತು.
ಪಾಕಿಸ್ತಾನ ತಂಡದ ಆರಂಭಿಕ ಆಟಗಾರ 60 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಹಾಯದಿಂದ 100 ರನ್ ಬಾರಿಸಿ ಔಟ್ ಆದರು. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ಸಾಹಿಬ್‌ಜಾದ ಫರ್ಹಾನ್ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಅಲ್ಲದೆ ಒಂದೇ ಟಿ20 ವಿಶ್ವಕಪ್‌ನಲ್ಲಿ 2 ಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಆರಂಭಿಕ ಆಟಗಾರರನ್ನು ಬಿಟ್ಟರೆ ಉಳಿದ ಯಾವ ಆಟಗಾರರು ಎರಡಂಕಿಯನ್ನು ಮುಟ್ಟಲಿಲ್ಲ. ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 212 ರನ್ ಸೇರಿಸಿತು.
ಆರಂಭಿಕ ಆಟಗಾರ ಪಾತುಂ ನಿಸ್ಸಾಂಕ (3) ಹಾಗೂ ಕಾಮಿಲ್ ಮಿಶ್ರಾ (26) ರನ್ ಕಲೆ ಹಾಕುವಲ್ಲಿ ವಿಫಲರಾಗಿ ಪವರ್ ಪ್ಲೇನಲ್ಲಿ ಔಟ್ ಆದರು. ಮೂರನೇ ವಿಕೆಟ್‌ಗೆ ಚರಿತ್ ಅಸಲಂಕಾ ಮತ್ತು ಪವನ್ ರಥನಾಯಕ 28 ಎಸೆತಗಳಲ್ಲಿ 42 ರನ್ ಸಿಡಿಸಿತು. ಚರಿತ್ ಅಸಲಂಕಾ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 25 ರನ್ ಸಿಡಿಸಿ ಔಟ್ ಆದರು. ಕಾಮಿಂದು ಮೆಂಡಿಸ್ (3), ಜನಿತ್ ಲಿಯಾನಗೆ (5) ಜವಾಬ್ದಾರಿ ಮರೆತರು.

6ನೇ ವಿಕೆಟ್‌ಗೆ ಪವನ್ ರಥನಾಯಕ ಹಾಗೂ ನಾಯಕ ದಸನ್ಶನಕ ಜೋಡಿ ಅಬ್ಬರದ ಆಟವನ್ನು ಆಡಿ ಗೆಲುವಿನ ಆಸೆಯನ್ನು ಚಿಗುರಿಸಿತು. ಈ ಜೋಡಿ 33 ಎಸೆತಗಳಲ್ಲಿ 61 ರನ್ ಸೇರಿಸಿತು. ಈ ಹಂತದಲ್ಲಿ ಪವನ್ ರಥನಾಯಕ 37 ಎಸೆತಗಳಲ್ಲಿ 58 ರನ್ ಬಾರಿಸಿ ಔಟ್ ಆದರು.

ಕೊನೆಯ ಓವರ್‌ನಲ್ಲಿ ಗೆಲ್ಲಲು 28 ರನ್ ಅವಶ್ಯಕತೆ ಇತ್ತು. ಬ್ಯಾಟಿಂಗ್‌ನಲ್ಲಿ ನಾಯಕ ದಸನ್ಶನಕ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಮೊದಲ ಎಸೆತದಲ್ಲಿ ಬೌಂಡರಿ, ಎರಡನೇ, ಮೂರನೇ, ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ ಮಿಂಚಿದರು. ಆದರೆ ಕೊನೆಯ ಎರಡು ಎಸೆತದಲ್ಲಿ 6 ರನ್ ಬಾರಿಸುವಲ್ಲಿ ವಿಫಲರಾದರು. ಶ್ರೀಲಂಕಾ ಈ ಪಂದ್ಯದಲ್ಲಿ ಸೋತರೂ ಸಹ ದಸನ್ಶನಕ ಮಿಂಚಿದರು. ಅಂತಿಮವಾಗಿ ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 207 ರನ್ ಸೇರಿಸಿತು.