ಏಷ್ಯಾ ಕಪ್ ಹಾಗೂ ವಿಶ್ವಕಪ್ ಟೂರ್ನಿ ಸನಿಹದಲ್ಲಿರುವಾಗ ಪಾಕಿಸ್ತಾನ ಕ್ರಿಕೆಟ್ ತಂಡ ದೊಡ್ಡ ಸಾಧನೆಯೊಂದು ಮಾಡಿದೆ. ಏಕದಿನ ಮಾದರಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಈಗ ವಿಶ್ವದ ನಂಬರ್ 1 ತಂಡ ಎನಿಸಿಕೊಂಡಿದೆ. ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 3-0 ಅಂತರದಿಂದ ಗೆಲುವು ಸಾಧಿಸಿದ್ದು ಈ ವೈಟ್‌ವಾಶ್ ಗೆಲುವಿನೊಂದಿಗೆ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ.
ಶನಿವಾರ ಶ್ರೀಲಂಕಾದ ಕೊಲಂಬೋದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ಕೊಎನಯ ಪಂದ್ಯದಲ್ಲಿ ಪಾಕಿಸ್ತಾನ 59 ರನ್‌ಗಳ ಅಂತರದ ಗೆಲುವು ಸಾಧಿಸಿತು. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಪಾಕಿಸ್ತಾನ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿತ್ತು. ಈ ಮೂಲಕ ಏಷ್ಯಾಕಪ್‌ಗೆ ಕೆಲವೇ ದಿನಗಳಿರುವಾಗ ದೊಡ್ಡ ಸಂದೇಶ ರವಾನಿಸಿದೆ.

ಏಕದಿನ ಶ್ರೇಯಾಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾವನ್ನು ಪಾಕಿಸ್ತಾನ ಹಿಂದಿಕ್ಕಿದ್ದು ವಿಶ್ವಕಪ್‌ಗೆ ಮುನ್ನ ಟಾಪ್ 1 ತಂಡವಾಗಿ ಹೊರಹೊಮ್ಮಿದೆ. ಏಷ್ಯಾಕಪ್ 2023 ಟೂರ್ನಿಯನ್ನು ಕೂಡ ಪಾಕಿಸ್ತಾನ ತಂಡಕ್ಕೆ ಗೆಲ್ಲಲು ಸಾಧ್ಯವಾದರೆ ವಿಶ್ವಕಪ್ ಟೂರ್ನಿಗೆ ಕೂಡ ಪಾಕಿಸ್ತಾನ ತಂಡ ನಂಬರ್ 1 ತಂಡವಾಗಿಯೇ ಕಣಕ್ಕಿಳಿಯಲಿದೆ ಎಂಬುದು ಗಮನಾರ್ಹ.
ಪಾಕಿಸ್ತಾನ ತಮಡ 2725 ಅಂಕಗಳನ್ನು ಹೊಂದಿದ್ದು ಅಗ್ರಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನಕ್ಕೆ ಕುಸಿದಿರುವ ಆಸ್ಟ್ರೇಲಿಯಾ 2714 ಅಂಕಗಳನ್ನು ಹೊಂದಿದೆ. ಇನ್ನು ಭಾರತ ಏಕದಿನ ಶ್ರೇಯಾಂಕಪಟ್ಟಿಯಲ್ಲಿ ಮೂರನೇ ಸ್ಥಾನದೊಂದಿಗೆ ಏಷ್ಯಾಕಪ್‌ಗೆ ಹೆಜ್ಜೆಯಿಡಲಿದೆ.
ಇನ್ನು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಪ್ರದರ್ಶನ ನೀಡಿತ್ತು. ಪಾಕಿಸ್ತಾನ ತಮಡದ ನಾಯಕ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಅರ್ಧ ಶತಕ ಬಾರಿಸಿದರು. ಬಾಬರ್ ಅಜಂ 60 ರನ್‌ಗಳಿಸಿದರೆ ರಿಜ್ವಾನ್ 67 ರನ್‌ಗಳನ್ನು ಗಳಿಸಿದರು. ನಿಗದಿತ 50 ಓವರ್‌ಗಳಲ್ಲಿ ಪಾಕಿಸ್ತಾನ ತಂಡ 8 ವಿಕೆಟ್ ಕಳೆದುಕೊಂಡು 268 ರನ್‌ಗಳನ್ನು ಕಲೆಹಾಕಿತ್ತು.
ಇನ್ನು ಪಾಕಿಸ್ತಾನ ನೀಡಿದ ಈ ಮೊತ್ತವನ್ನು ಬೆನ್ನಟ್ಟಿದ ಅಫ್ಘಾನಿಸ್ಥಾನ ತಂಡ ಆರಂಭದಲಲ್ಇಯೇ ಹಿನ್ನಡೆ ಅನುಭವಿಸಿತು. ಹೀಗಾಗಿ ನಿಧಾನಗತಿಯಿಂದ ಬ್ಯಾಟಿಂಗ್ ನಡೆಸುತ್ತಾ ಸಾಗಿತು. ಅಗ್ರ ಕ್ರಮಾಂಖದ ಯಾವ ಆಟಗಾರರಿಂದ ಕುಡ ಪರಿಣಾಮಕಾರಿ ಪ್ರದರ್ಶನ ಬಾರಲಿಲ್ಲ. ಆದರೆ ಕೊನೆಯಲ್ಲಿ ಮುಜೀಬ್ ಉರ್ ರೆಹ್ಮಾನ್ 37 ಎಸೆತಗಳಲ್ಲಿ 64 ರನ್ ಬಾರಿಸಿ ಗಮನಸೆಳೆದಿದ್ದರು. ಆದರೆ ಇದು ತಂಡಕ್ಕೆ ಹೆಚ್ಚೇನೂ ಉಪಯೋಗವನ್ನುಂಟು ಮಾಡಲಿಲ್ಲ. ಅಂತಿಮವಾಗಿ ಅಫ್ಘನ್ ಪಡೆ 209 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಪಾಕಿಸ್ತಾನ 59 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.
ಇನ್ನು ಈ ಸರಣಿ ಗೆಲುವಿನೊಂದಿಗೆ ಪಾಕಿಸ್ತಾನ ಏಷ್ಯಾಕಪ್‌ಗೆ ಅದ್ಭುತ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುವುದು ನಿಶ್ಚಿತ. ಬುಧವಾರದಿಂದ ಏಷ್ಯಾಕಪ್ ಕ್ರೀಡಾಕೂಟ ಆರಂಭವಾಗಲಿದ್ದು ಏಷ್ಯಾದ ಅಗ್ರ ಆರು ತಂಡಗಳ ನಡುವಿನ ಸೆಳೆಸಾಟಕ್ಕೆ ಈಗ ವಿಶ್ವ ಕ್ರಿಕೆಟ್ ತಮ ಕಾದುಕುಳಿತಿದೆ. ಅದರಲ್ಲೂ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 2ರಂದು ಮುಖಾಮುಖಿಯಾಗಲಿರುವುದು ಎಲ್ಲರ ಚಿತ್ತವನ್ನು ತನ್ನತ್ತ ನೆಟ್ಟಿದೆ.