ಮುಲ್ತಾನ್: ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಜಯದ ಟ್ರ್ಯಾಕ್‌ಗೆ ಬರುವ ಪಾಕಿಸ್ತಾನ ತಂಡದ ಆಸೆ ದೂರ ಸರಿದಂತೆ ಕಾಣುತ್ತಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ ಸೋಲಿನ ಭೀತಿ ಎದುರಿಸುತ್ತಿದೆ. ಪಾಕ್ 115 ರನ್‌ಗಳ ಇನಿಂಗ್ಸ್ ಹಿನ್ನಡೆ ಅನುಭವಿಸುತ್ತಿದ್ದು, ಆರು ವಿಕೆಟ್ ಕಳೆದುಕೊಂಡಿದೆ.
ಗುರುವಾರ ನಾಲ್ಕನೇ ದಿನದಾಟವನ್ನು ಇಂಗ್ಲೆಂಡ್ 3 ವಿಕೆಟ್‌ಗೆ 492 ರನ್‌ಗಳಿಂದ ಮುಂದುವರಿಸಿ ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ಗೆ 823 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. ಇದಕ್ಕುತ್ತರವಾಗಿ ಎರಡನೇ ಇನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ ದಿನದಾಟದಂತ್ಯಕ್ಕೆ 6 ವಿಕೆಟ್‌ಗೆ 152 ರನ್ ಸೇರಿಸಿದೆ. ಪಾಕ್ ಪರ ಸಲ್ಮಾನ್ ಅಘಾ (ಅಜೇಯ 41) ಹಾಗೂ ಅಮರ್ ಜಮಾಲ್ (ಅಜೇಯ 27) ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪಾಕಿಸ್ತಾನ ಈ ಪಂದ್ಯದಲ್ಲಿ ಗೆಲುವು ದಾಖಲಿಸಲು ಚಮತ್ಕಾರವೇ ನಡೆಯಬೇಕಿದೆ.

ಇಂಗ್ಲೆಂಡ್ ತಂಡದ ಪರ ಸ್ಟಾರ್ ಆಟಗಾರರು ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅನುಭವಿ ಜೋ ರೂಟ್ ಹಾಗೂ ಭರವಸೆಯ ಆಟಗಾರ ಹ್ಯಾರಿ ಬ್ರೂಕ್ ಪಾಕ್ ಬೌಲರ್‌ಗಳನ್ನು ಕಾಡಿದರು. ಇವರು ನಾಲ್ಕನೇ ವಿಕೆಟ್‌ಗೆ 522 ಎಸೆತಗಳಲ್ಲಿ 454 ರನ್ ಸಿಡಿಸಿದರು. ರೂಟ್ 17 ಬೌಂಡರಿ ನೆರವಿನಿಂದ 262 ರನ್ ಬಾರಿಸಿ ಔಟ್ ಆದರು. ಬ್ರೂಕ್ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ತ್ರಿಬಲ್ ಶತಕ ಬಾರಿಸಿದರು. 29 ಬೌಂಡರಿ, 3 ಸಿಕ್ಸರ್ ನೆರವಿನಿಂದ ಬ್ರೂಕ್ 317 ರನ್ ಬಾರಿಸಿ ಔಟ್ ಆದರು. ಇವರ ಅಮೋಘ ಆಟದ ಫಲವಾಗಿ ಇಂಗ್ಲೆಂಡ್ ದೊಡ್ಡ ಮೊತ್ತವನ್ನು ಕಲೆ ಹಾಕಿತು.
ಪಾಕಿಸ್ತಾನ ತಂಡದ ಸ್ಟಾರ್ ಬೌಲರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಶಾಹೀನ್ ಶಾ ಆಫ್ರಿದಿ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡರು. ಇವರು 26 ಓವರ್ ಬೌಲರ್ ಮಾಡಿ 120 ರನ್ ನೀಡಿದರು. ಉಳಿದಂತೆ ನಸೀಮ್ ಶಾ 157, ಅಬ್ರಾರ್ ಅಹ್ಮದ್ 174, ಅಮೀರ್ ಜಮಲ್ 126, ಸಲ್ಮಾನ್ ಅಘಾ 118, ಸೈಮ್ ಅಯೂಬ್ 101 ರನ್ ನೀಡಿ ಕೈ ಸುಟ್ಟುಕೊಂಡರು. ನಸೀಮ್ ಶಾ ಹಾಗೂ ಸೈಮ್ ಅಯೂಬ್ ಮಾತ್ರ ಎರಡು ವಿಕೆಟ್ ಪಡೆದು ಬೀಗಿದರು.

ಎರಡನೇ ಇನಿಂಗ್ಸ್ ಆರಂಭಿಸಿದ ಪಾಕ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಅಬ್ದುಲ್ಲಾ ಶಫೀಕ್ ಸೊನ್ನೆ ಸುತ್ತಿದರು. ಇನ್ನೋರ್ವ ಆರಂಭಿಕ ಆಟಗಾರ ಸೈಮ್ ಅಯೂಬ್ (25) ಜವಾಬ್ದಾರಿ ಮರೆತರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಪಾಕ್ ನಾಯಕ ಶಾನ್ ಮಸೂದ್ 11 ರನ್‌ಗಳಿಗೆ ಆಟ ಮುಗಿಸಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಪಾಕ್ ತವರಿನಲ್ಲಿ ಮತ್ತೊಂದು ಟೆಸ್ಟ್ ಪಂದ್ಯವನ್ನು ಸೋಲುವ ಭೀತಿಯನ್ನು ಎದುರಿಸುತ್ತಿದೆ.