
ಪಾಕಿಸ್ತಾನದ ಹಿರಿಯ ವಿಕೆಟ್ ಕೀಪರ್ ಬ್ಯಾಟರ್ ಕಮ್ರಾನ್ ಅಕ್ಮಲ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. 2023ರ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯ ಆರಂಭಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಕಮ್ರಾನ್ ಅಕ್ಮಲ್ ಯುವ ಆಟಗಾರರಿಗೆ ಅವಕಾಶ ಬಿಟ್ಟುಕೊಡುವ ಸಮಯ ಬಂದಿದೆ ಎಂದಿದ್ದಾರೆ.
ಕಮ್ರಾನ್ ಅಕ್ಮಲ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ರಾಷ್ಟ್ರೀಯ ಆಯ್ಕೆ ಸಮಿತಿಗೆ ಇತ್ತೀಚೆಗಷ್ಟೇ ನೇಮಕಗೊಳಿಸಿತ್ತು. ಇಇದಕ್ಕೂ ಮುನ್ನ ಪಿಎಸ್‌ಎಲ್‌ನ ಮುಂಬರುವ ಆವೃತ್ತಿಗೆ ಬಾಬರ್ ಅಜಮ್ ನೇತೃತ್ವದ ಪೇಶಾವರ್ ಝಲ್ಮಿಯ ಬ್ಯಾಟಿಂಗ್ ಸಲಹೆಗಾರರಾಗಿ ಅಕ್ಮಲ್ ಅವರನ್ನು ನೇಮಕಗೊಳಿಸಲಾಗಿತ್ತು. 41 ಕಮ್ರಾನ್ ಅಕ್ಮಲ್ ವರ್ಷದ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಜವಾಬ್ಧಾರಿ ವಹಿಸಿಕೊಳ್ಳಲು ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ. "ಪಿಸಿಬಿಯಲ್ಲಿನ ಹೊಸ ಜವಾಬ್ಧಾರಿಯಿಂದಾಗಿ ನಾನು ಖಂಡಿತವಾಗಿಯೂ ಮುಂದೆ ಕ್ರಿಕೆಟ್ ಆಡುವುದಿಲ್ಲ. ಸಣ್ಣ ಲೀಗ್‌ಗಳಲ್ಲಿ ಆಡಬಹುದು ಅದು ಕೂಡ ಪಿಸಿಬಿ ನನಗೆ ಜವಾಬ್ಧಾರಿಗಳ ಮೇಲೆ ಅವಲಂಬಿತವಾಗಿದೆ" ಎಂದಿದ್ದಾರೆ ಕಮ್ರಾನ್ ಅಕ್ಮಲ್.
ಅಕ್ಮಲ್ 2002ರಲ್ಲಿ ಪಾಕಿಸ್ತಾನ ತಂಡದ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು 2017ರವರೆಗೆ ಪಾಕ್ ಪರವಾಗಿ ಆಡಿದ್ದಾರೆ. 53 ಟೆಸ್ಟ್, 157 ಏಕದಿನ ಹಾಗೂ 58 ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿರುವ ಬಲಗೈ ಬ್ಯಾಟರ್ ಕ್ರಮವಾಗಿ 2648, 3236 ಮತ್ತು 987 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಕ್ಮಲ್ 11 ಶತಕ ಹಾಗೂ 27 ಅರ್ಧಶತಕಗಳನ್ನು ಸಿಡಿಸಿದ್ದಾರೆ. 2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಯಾನದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಏಕದಿನ ಪಂದ್ಯ ಆಡುವ ಮೂಲಕ ಕೊನೆಯ ಬಾರಿಗೆ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದರು.
ಕಮ್ರಾನ್ ಅಕ್ಮಲ್ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದು ಲೀಗ್‌ನಲ್ಲಿ ಅತೀ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 2016-2022ರ ಆವೃತ್ತಿಯವರೆಗೆ ಜಲ್ಮಿ ತಂಡವನ್ನು ಪ್ರತಿನಿಧಿಸಿರುವ ಅಕ್ಮಲ್ 27.38ರ ಸರಾಸರಿಯಲ್ಲಿ 136.94ರ ಸ್ಟ್ರೈಕ್‌ರೇಟ್‌ನೊಂದಿಗೆ 1972 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ 12 ಅರ್ಧ ಶತಕ ಸೇರಿದೆ. 66 ಇನ್ನಿಂಗ್ಸ್‌ಗಳಲ್ಲಿ 2413 ರನ್‌ಗಳನ್ನು ಗಳಿಸಿರುವ ಬಾಬರ್ ಅಜಂ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಇನ್ನು ಪಾಕಿಸ್ತಾನ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕಮ್ರಾನ್ ಅಕ್ಮಲ್ ದಾಖಲೆ ಅದ್ಭುತವಾಗಿದೆ. 13,000ಕ್ಕೂ ಅಧಿಕ ರನ್‌ಗಳನ್ನು ಅಕ್ಮಲ್ ಗಳಿಸಿದ್ದು 33 ಶತಕ ಹಾಗೂ 62 ಅರ್ಧ ಶತಕ ಸಿಡಿಸಿದ್ದಾರೆ.