ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತಂಡ 43 ರನ್‌ಗಳ ಸೋಲು ಅನುಭವಿಸಿದೆ. ಈ ಸೋಲಿನೊಂದಿಗೆ ಪಾಕಿಸ್ತಾನ 3 ಪಂದ್ಯಗಳ ಏಕದಿನ ಸರಣಿಯನ್ನು 0-3 ಅಂತರದಲ್ಲಿ ಕಳೆದುಕೊಂಡಿದೆ. ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ಪ್ರವಾಸದಲ್ಲಿ ಕೇವಲ ಒಂದು ಗೆಲುವು ಮಾತ್ರ ಗಳಿಸಲು ಸಾಧ್ಯವಾಯಿತು. ಆದರೂ, ಪಾಕಿಸ್ತಾನ ಟಿ20 ಸರಣಿಯನ್ನು 1-4 ಅಂತರದಿಂದ ಸೋತಿತ್ತು.
ಶನಿವಾರ ಮೌಂಟ್ ಮೌಂಗನುಯಿಯಲ್ಲಿರುವ ಬೇ ಓವಲ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಸೋಲನ್ನು ಎದುರಿಸಿತು. ಈ ವೇಳೆ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನವನ್ನು ಮೈದಾನದಲ್ಲಿ ಹಾಜರಿದ್ದ ಅಭಿಮಾನಿಗಳು ಟೀಕಿಸಿದ್ದಾರೆ. ಇದಾದ ನಂತರ ಮೈದಾನದಲ್ಲಿ ಅಹಿತಕರ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಅಫ್ಘಾನ್ ಮತ್ತು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಯೊಬ್ಬರು ಸೋಲಿನ ನಂತರ ಆಟಗಾರರನ್ನು ನಿಂದಿಸಿದ್ದಾರೆ. ಇದಕ್ಕೆ ಪಾಕಿಸ್ತಾನ ಆಲ್‌ರೌಂಡರ್ ಖುಶ್ದಿಲ್ ಶಾ ನಿಂದಿಸದಂತೆ ಹೇಳಿದ್ದಾರೆ. ಆದರೂ, ಅಭಿಮಾನಿಗಳು ನಿಂದಿಸುವುದನ್ನು ನಿಲ್ಲಿಸಿಲ್ಲ. ಹೀಗಾಗಿ ಮೈದಾನದಲ್ಲಿ ಗಲಾಟೆ ಪ್ರಾರಂಭವಾಗಿದೆ.
ಖುಸ್ದಿಲ್ ಶಾ ಅಫ್ಘಾನ್ ಅಭಿಮಾನಿಗಳ ಕಡೆಗೆ ಆಕ್ರಮಣಕಾರಿಯಾಗಿ ಓಡಿ ಬಂದು ತಾಳ್ಮೆ ಕಳೆದುಕೊಂಡರು. ಈ ಸಂದರ್ಭದಲ್ಲಿ ಖುಸ್ದಿಲ್ ಶಾ ಮತ್ತು ಇಬ್ಬರು ಅಫ್ಘಾನ್ ಅಭಿಮಾನಿಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಭದ್ರತಾ ಸಿಬ್ಬಂದಿ ಘಟನೆಯನ್ನು ಸಮಯಕ್ಕೆ ಸರಿಯಾಗಿ ನಿಲ್ಲಿಸದಿದ್ದರೆ, ಅಭಿಮಾನಿಗಳು ಮತ್ತು ಪಾಕಿಸ್ತಾನ ಕ್ರಿಕೆಟಿಗನ ನಡುವೆ ದೊಡ್ಡ ಗಲಾಟೆ ಅಗುವ ಸಾಧ್ಯತೆ ಇತ್ತು.
ಘಟನೆ ಬಳಿಕ ಪಾಕಿಸ್ತಾನ ತಂಡದ ದೂರಿನ ಮೇರೆಗೆ, ಕ್ರೀಡಾಂಗಣದ ಅಧಿಕಾರಿಗಳು ಮಧ್ಯಪ್ರವೇಶಿಸಿ ಇಬ್ಬರು ಅಭಿಮಾನಿಗಳನ್ನು ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಕಾರ, ಕ್ರೀಡಾಂಗಣದಲ್ಲಿ ಹಾಜರಿದ್ದ ಕೆಲವರು ಖುಸ್ದಿಲ್ ಅವರನ್ನು ನಿಂದಿಸಿದ್ದಾರೆ. ಅಲ್ಲದೆ, ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಎನ್ನಲಾಗಿದೆ. ವಿದೇಶಿ ಅಭಿಮಾನಿಗಳು ಪಾಕಿಸ್ತಾನ ಆಟಗಾರರ ವಿರುದ್ಧ ನಿಂದನೀಯ ಭಾಷೆ ಬಳಸುವುದನ್ನು ಬಲವಾಗಿ ಖಂಡಿಸಿದೆ.
ಪಂದ್ಯದ ಸಮಯದಲ್ಲಿ, ವಿದೇಶಿ ಅಭಿಮಾನಿಗಳು ಮೈದಾನದಲ್ಲಿದ್ದ ಕ್ರಿಕೆಟಿಗರ ಬಗ್ಗೆ ಅನುಚಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಖುಷ್ದಿಲ್ ಶಾ ಮಧ್ಯಪ್ರವೇಶಿಸಿ ಅಭಿಮಾನಿಗಳಿಗೆ ಸುಮ್ಮನಿರುವಂತೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅಭಿಮಾನಿಗಳು ಇನ್ನಷ್ಟು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.