2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ದಸುನ್ ಶನಕ ನಾಯತ್ವದ ಶ್ರೀಲಂಕಾ ತಂಡದ ವಿರುದ್ಧ ಹೆಚ್ಚಿನ ಸ್ಕೋರಿಂಗ್ ರೋಚಕ ಪಂದ್ಯವನ್ನು ಗೆದ್ದುಬೀಗಿತು.
ಕುಸಲ್ ಮೆಂಡಿಸ್ ಮತ್ತು ಸದೀರ ಸಮರವಿಕ್ರಮ ಅವರ ಶತಕಗಳ ನೆರವಿನಿಂದ ಶ್ರೀಲಂಕಾ ತಂಡ 345 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಆ ಬಳಿಕ ಬಾಬರ್ ಅಜಂ ಅವರಂತಹ ಅಗ್ರ ಬ್ಯಾಟರ್‌ಗಳು ವಿಫಲವಾದರೂ, ಪಾಕಿಸ್ತಾನ ಪರ ಅಬ್ದುಲ್ಲಾ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ಶತಕಗಳೊಂದಿಗೆ ಮುನ್ನಡೆಸಿ ಸುಲಭವಾಗಿ ಗೆಲುವು ಸಾಧಿಸಿತು.
ಮೊಹಮ್ಮದ್ ರಿಜ್ವಾನ್ 131 ರನ್ ಗಳಿಸಿ ಅಜೇಯರಾಗುಳಿದರು ಮತ್ತು ಪಾಕಿಸ್ತಾನ ತಂಡವು 48.2 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿಯನ್ನು ದಾಟಿತು. ಇದೇ ವೇಳೆ ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ ಮೋಸದ ಆಟವಾಡಿದೆಯಾ ಎಂಬ ಚರ್ಚೆಗಳು ಸಾಮಾಜಿಕ ಮಾಧ್ಯಮದಲ್ಲಿ ಕೇಳಿಬರುತ್ತಿವೆ.

ಇದೀಗ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು, ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ಸಮಯದಲ್ಲಿ, ಹಸನ್ ಅಲಿ ಅವರ ಬೌಲಿಂಗ್‌ನಲ್ಲಿ ಇಮಾಮ್-ಉಲ್-ಹಕ್ ಅವರು ಕುಸಲ್ ಮೆಂಡಿಸ್‌ನ ಕ್ಯಾಚ್ ಹಿಡಿದಾಗ ಮೈದಾನದಲ್ಲಿನ ಆಸಕ್ತಿದಾಯಕ ಅಂಶವನ್ನು ಎತ್ತಿ ತೋರಿಸಿದರು.
ಹಲವು ಸಾಮಾಜಿಕ ಮಾಧ್ಯಮ ಖಾತೆಗಳು ಬೌಂಡರಿ ಗೆರೆಯನ್ನು ಹಿಂದೆ ಸರಿಸಿರಬಹುದು ಎಂದು ಭಾವಿಸಲಾಗಿದೆ. ಇದು ಇಮಾಮ್-ಉಲ್-ಹಕ್‌ಗೆ ಬೌಂಡರಿ ಹಗ್ಗದ ಹತ್ತಿರ ಕ್ಯಾಚ್ ತೆಗೆದುಕೊಳ್ಳಲು ಸುಲಭವಾಯಿತು.
ವೈರಲ್ ಆದ ಫೋಟೋದಲ್ಲಿ ಹುಲ್ಲಿನ ತೇಪೆಯನ್ನು ತೋರಿಸಲಾಗಿದೆ. ಬೌಂಡರಿ ಹಗ್ಗದ ಕಾರಣದಿಂದಾಗಿ ಅದು ಸ್ವಲ್ಪ ಬಣ್ಣರಹಿತವಾಗಿ ಕಾಣುತ್ತದೆ. ಆದರೆ, ಈ ಬಗ್ಗೆ ಐಸಿಸಿ ಅಥವಾ ಬಿಸಿಸಿಐ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಇನ್ನು ಪಾಕಿಸ್ತನಾ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೆ ಸಂಬಂಧಿಸಿದಂತೆ, ಆರಂಭಿಕ ಅಬ್ದುಲ್ಲಾ ಶಫೀಕ್ ಮತ್ತು ವಿಕೆಟ್‌ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರ ಅದ್ಭುತ ಶತಕಗಳು ಪಾಕಿಸ್ತಾನ ತಂಡದ ಗೆಲುವಿಗೆ ನೆರವಾದವು.
ಕೇವಲ ಐದನೇ ಏಕದಿನ ಪಂದ್ಯವಾಡಿದ ಅಬ್ದುಲ್ಲಾ ಶಫೀಕ್ 103 ಎಸೆತಗಳಲ್ಲಿ 113 ರನ್ ಗಳಿಸಿದರೆ, ಮೊಹಮ್ಮದ್ ರಿಜ್ವಾನ್ ಅಜೇಯ 131 ರನ್ ಬಾರಿಸಲು ಬೆನ್ನು ಸೆಳೆತವನ್ನು ಎದುರಿಸಿದರು. ಈ ಜೋಡಿ 176 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಆಸರೆಯಾದರು.
ಸೌದ್ ಶಕೀಲ್ ಕೂಡ 31 ರನ್ ಗಳಿಸಿದರು. ಅಂತಿಮವಾಗಿ ಪಾಕಿಸ್ತಾನ ತಂಡವು ಶ್ರೀಲಂಕಾ ನೀಡಿದ್ದ 345 ರನ್‌ಗಳ ಗುರಿಯನ್ನು 48.2 ಓವರ್‌ಗಳಲ್ಲಿ ಬೆನ್ನಟ್ಟಿತು.
ಪಂದ್ಯಾವಳಿಯಲ್ಲಿ ತಮ್ಮ ಎರಡನೇ ಗೆಲುವಿನ ನಂತರ ಪಾಕಿಸ್ತಾನ ತಂಡವು ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್ ಬಳಿಕ ಪಾಯಿಂಟ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು.
ಇದಕ್ಕೂ ಮೊದಲು ಶ್ರೀಲಂಕಾ ಪರ ಕುಸಲ್ ಮೆಂಡಿಸ್ (122 ರನ್) ಮತ್ತು ಸದೀರ ಸಮರವಿಕ್ರಮ (108 ರನ್) ಅಮೋಘ ಶತಕಗಳ ನೆರವಿನಿಂದ ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 344 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು.
ಶ್ರೀಲಂಕಾ ತಂಡದ ಕುಸಲ್ ಮೆಂಡೀಸ್ 77 ಎಸೆತಗಳಲ್ಲಿ 14 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 122 ರನ್‌ಗಳ ಭರ್ಜರಿ ಶತಕ ಸಿಡಿಸಿದರು. ಸದೀರ ಸಮರವಿಕ್ರಮ 89 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 108 ರನ್ ಗಳಿಸಿದರು. ಪಾಥುಮ್ ನಿಸ್ಸಾಂಕ ಕೂಡ 51 ರನ್ ಬಾರಿಸಿದರು.