ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವೆ ಐದು ಪಂದ್ಯಗಳ ಟಿ20 ಸರಣಿಯ ಆರಂಭವಾಗಿದೆ. ಮಾರ್ಚ್ 16 ರ ಭಾನುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಹೀನಾಯ ಸೋಲು ಅನುಭವಿಸಿದೆ. ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ಗುಂಪು ಹಂತದಲ್ಲೇ ಹೀನಾಯವಾಗಿ ಸೋತು ಆತಿಥೇಯ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಗುಳಿದಿತ್ತು. ಈಗ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಎದುರು ನ್ಯೂಜಿಲೆಂಡ್ ತಂಡ 9 ವಿಕೆಟ್‌ಗಳು ಮತ್ತು 59 ಎಸೆತಗಳು ಬಾಕಿ ಇರುವಂತೆ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 18.4 ಓವರ್‌ಗಳಲ್ಲೇ ಕೇವಲ 91 ರನ್‌ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿ ಬೆನ್ನಟ್ಟಿದ್ದ ನ್ಯೂಜಿಲೆಂಡ್ ತಂಡ ಒಂದು ವಿಕೆಟ್ ಕಳೆದುಕೊಂಡು ಕೇವಲ 10.1 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.

ಹೊಸ ನಾಯಕ ಸಲ್ಮಾನ್ ಅಲಿ ಅಘಾ ನೇತೃತ್ವದ ಪಾಕಿಸ್ತಾನ ತಂಡ ಆರಂಭಿಕ ಬ್ಯಾಟಿಂಗ್ ದೊಡ್ಡ ವೈಫಲ್ಯವನ್ನು ಕಂಡಿತು. ಕಿವೀಸ್ ಪಡೆಯ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದರು. ಪಾಕಿಸ್ತಾನ ತಂಡ 11 ರನ್ ಗಳಿಸುವುದರಲ್ಲಿ ಮೊಹಮ್ಮದ್ ಹ್ಯಾರಿಸ್ (0), ಹಸನ್ ನವಾಜ್ (0), ಇರ್ಫಾನ್ ಖಾನ್ (1) ಮತ್ತು ಶದಾಬ್ ಖಾನ್ (3) ವಿಕೆಟ್‌ಗಳನ್ನು ಕಳೆದುಕೊಂಡಿತು.
ಸಂಕಷ್ಟದಲ್ಲಿದ್ದ ಪಾಕಿಸ್ತಾನ ತಂಡಕ್ಕೆ ನಾಯಕ ಸಲ್ಮಾನ್ ಆಘಾ (18) ಹಾಗು ಖುಷ್ದಿಲ್ ಷಾ (32) ಚೇತರಿಕೆ ಆಟವಾಡಿದರು. ಆದರೆ ಈ ಇಬ್ಬರು ಬ್ಯಾಟರ್ಸ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಕಿವೀಸ್ ಬೌಲರ್ಸ್ ಬಿಡಲಿಲ್ಲ. ನಂತರ ಬಂದ ಯಾವುದೇ ಪಾಕಿಸ್ತಾನ ಬ್ಯಾಟರ್ ಬಿಗ್ ಇನ್ನಿಂಗ್ಸ್ ಆಡಲಿಲ್ಲ. ಪರಿಣಾಮ ಪಾಕಿಸ್ತಾನ 91 ರನ್‌ಗಳಿಗೆ ಸರ್ವಪತನವಾಯಿತು. ಕೀವಿಸ್ ಪಡೆ ಪರ ಜಾಕೋಬ್ ಡಫ್ಫಿ 4 ವಿಕೆಟ್‌ಗಳನ್ನು ಕಬಳಿ ಮಿಂಚಿದರೆ, ಕೈಲ್ ಜೇಮಿಸನ್ 3, ಇಶ್ ಸೋಧಿ 2 ಹಾಗು ಜಕಾರಿ ಫೌಲ್ಕ್ಸ್ ಒಂದು ವಿಕೆಟ್ ಪಡೆದರು.
ಪಾಕಿಸ್ತಾನ ನೀಡಿದ 91 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಕಿವೀಸ್ ಪಡೆ ಪರ ಟಿಮ್ ಸೀಫರ್ಟ್ 44 ರನ್ ಗಳಿಸಿ ಔಟಾದರು. ಇದಾದ ನಂತರ ಫಿನ್ ಅಲೆನ್ (29) ಮತ್ತು ಟಿಮ್ ರಾಬಿನ್ಸನ್ (18) ಉತ್ತಮ ಜೊತೆಯಾಟ ಆಡುವ ಮೂಲಕ ಗೆಲುವಿನ ಗುರಿ ತಲುಪಿದರು.
ನ್ಯೂಜಿಲೆಂಡ್: ಟಿಮ್ ಸೀಫರ್ಟ್, ಫಿನ್ ಅಲೆನ್, ಟಿಮ್ ರಾಬಿನ್ಸನ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಮಿಚೆಲ್ ಹೇ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್ (ನಾಯಕ), ಜಕಾರಿ ಫೌಲ್ಕ್ಸ್, ಕೈಲ್ ಜೇಮಿಸನ್, ಇಶ್ ಸೋಧಿ, ಜಾಕೋಬ್ ಡಫಿ.
ಪಾಕಿಸ್ತಾನ: ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಹಸನ್ ನವಾಜ್, ಸಲ್ಮಾನ್ ಅಘಾ (ನಾಯಕ), ಇರ್ಫಾನ್ ಖಾನ್, ಶಾದಾಬ್ ಖಾನ್, ಅಬ್ದುಲ್ ಸಮದ್, ಖುಷ್ದಿಲ್ ಶಾ, ಜಹಾಂದಾದ್ ಖಾನ್, ಶಾಹೀನ್ ಅಫ್ರಿದಿ, ಮೊಹಮ್ಮದ್ ಅಲಿ, ಅಬ್ರಾರ್ ಅಹ್ಮದ್.