
ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದರೆ, ಮತ್ತೊಂದೆಡೆ ವಿವಿಧ ವಿದೇಶಿ ತಂಡಗಳು ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳಲ್ಲಿ ನಿರತವಾಗಿವೆ. ನ್ಯೂಜಿಲೆಂಡ್ ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿದೆ.
5 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 5 ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಪಾಕಿಸ್ತಾನವನ್ನು ಎದುರಿಸಿದೆ. ಮೊದಲಿಗೆ ನಡೆದ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಮೊದಲಿಗೆ ಪಾಕಿಸ್ತಾನ 2 ಪಂದ್ಯಗಳಲ್ಲಿ ಗೆದ್ದು, ನಂತರ ಮೂರು ಹಾಗೂ ಐದನೇ ಟಿ ಟ್ವೆಂಟಿ ಪಂದ್ಯಗಳನ್ನು ನ್ಯೂಜಿಲೆಂಡ್ ತಂಡ ಗೆದ್ದು ನಾಲ್ಕನೇ ಟಿ ಟ್ವೆಂಟಿ ಪಂದ್ಯ ಡ್ರಾ ಆದ ಕಾರಣ ಸರಣಿ ಡ್ರಾ ಆಗಿತ್ತು.
ಹೀಗೆ ಟಿ ಟ್ವೆಂಟಿ ಸರಣಿ ಡ್ರಾ ಆದ ಬೆನ್ನಲ್ಲೇ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಪರಸ್ಪರ ಮುಖಾಮುಖಿಯಾದವು. ರಾವಲ್ಪಿಂಡಿಯಲ್ಲಿ ನಡೆದ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಗೆದ್ದ ಪಾಕಿಸ್ತಾನ ಕರಾಚಿಯಲ್ಲಿ ನಡೆದ ಮೂರು ಹಾಗೂ ನಾಲ್ಕನೇ ಏಕದಿನ ಪಂದ್ಯಗಳಲ್ಲಿಯೂ ಜಯ ಸಾಧಿಸಿತು. ಆದರೆ ಕರಾಚಿಯಲ್ಲಿಯೇ ನಡೆದ ಐದನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಜಯ ಸಾಧಿಸಿದೆ.
ಹೀಗೆ ಮೊದಲ ನಾಲ್ಕು ಏಕದಿನ ಪಂದ್ಯಗಳಲ್ಲಿ ಸತತವಾಗಿ ಜಯ ಸಾಧಿಸಿದ್ದ ಪಾಕಿಸ್ತಾನ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿತ್ತು. ಹೌದು, ಮೇ 5ರ ಶುಕ್ರವಾರದಂದು ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 334 ರನ್ ಕಲೆಹಾಕಿದ್ದ ಪಾಕಿಸ್ತಾನ ಪ್ರವಾಸಿ ನ್ಯೂಜಿಲೆಂಡ್ ತಂಡಕ್ಕೆ 335 ರನ್‌ಗಳ ಗುರಿಯನ್ನು ನೀಡಿತ್ತು.
ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ನ್ಯೂಜಿಲೆಂಡ್ 43.4 ಓವರ್‌ಗಳಲ್ಲಿ 232 ರನ್ ಗಳಿಸಿ ಆಲ್ ಔಟ್ ಆಗಿತ್ತು. ಈ ಮೂಲಕ ಪಾಕಿಸ್ತಾನ 102 ರನ್‌ಗಳ ಅಂತರದಿಂದ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಪಾಕಿಸ್ತಾನ ತನ್ನ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಮಾಡಿರದ ಸಾಧನೆಯನ್ನು ಮಾಡಿತ್ತು. ಐಸಿಸಿ ಏಕದಿನ ಟೀಮ್ ರ‍್ಯಾಂಕಿಂಗ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ಏರಿಕೆ ಕಂಡು ದಾಖಲೆ ಬರೆದಿತ್ತು.
ಆದರೆ ಪಾಕಿಸ್ತಾನ ಮಾಡಿದ ಈ ಅಪರೂಪದ ಸಾಧನೆ ಎರಡೇ ದಿನಕ್ಕೆ ನಾಶವಾಗಿದೆ. ನಿನ್ನೆ ( ಮೇ 7 ) ಭಾನುವಾರದಂದು ನಡೆದ ಐದನೇ ಏಕದಿನ ಪಂದ್ಯದಲ್ಲಿ ಸೋತ ಪಾಕಿಸ್ತಾನ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಒಂದನೇ ಸ್ಥಾನದಿಂದ ಮರಳಿ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 49.3 ಓವರ್‌ಗಳಲ್ಲಿ 299 ರನ್ ಕಲೆಹಾಕಿ ಆಲ್‌ಔಟ್ ಆಗಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 300 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲಗೊಂಡ ಪಾಕಿಸ್ತಾನ 46.1 ಓವರ್‌ಗಳಲ್ಲಿ 252 ರನ್ ಗಳಿಸಿ ಆಲ್ಔಟ್ ಆಗಿತ್ತು. ಈ ಮೂಲಕ ನ್ಯೂಜಿಲೆಂಡ್ 47 ರನ್‌ಗಳ ಗೆಲುವನ್ನು ಕಂಡಿತ್ತು.
ಈ ಸೋಲಿನ ಬಳಿಕ ಪಾಕಿಸ್ತಾನ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಮರಳಿ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದ್ದು, ಸದ್ಯ ಯಾವ ತಂಡಗಳು ಎಷ್ಟು ಅಂಕಗಳೊಂದಿಗೆ ಎಷ್ಟನೇ ಸ್ಥಾನದಲ್ಲಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಆಸ್ಟ್ರೇಲಿಯಾ - 113 ರೇಟಿಂಗ್
2. ಭಾರತ - 113 ರೇಟಿಂಗ್
3. ಪಾಕಿಸ್ತಾನ - 112 ರೇಟಿಂಗ್
4. ಇಂಗ್ಲೆಂಡ್ - 111 ರೇಟಿಂಗ್
5. ನ್ಯೂಜಿಲೆಂಡ್ - 108 ರೇಟಿಂಗ್