ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಕರಾಚಿಯ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಪಾಕಿಸ್ತಾನ ತಂಡ ಹೀನಾಯ ಸೋಲು ಕಂಡಿದೆ. ತವರಿನಲ್ಲಿ ಸೋತಿರುವ ಪಾಕಿಸ್ತಾನ ತಂಡ ಹಲವು ಟೀಕೆಗಳನ್ನು ಎದುರಿಸುವಂತಾಗಿದೆ.
ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ನಾಯಕ ಮೊಹಮ್ಮದ್ ರಿಜ್ವಾನ್ ಬೌಲಿಂಗ್ ಮಾಡಲು ನಿರ್ಧಿರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 5 ವಿಕೆಟ್ ಕಳೆದುಕೊಂಡು 320 ರನ್ ಗಳಿಸಿತು. ಕಿವೀಸ್ ಪಡೆ ನೀಡಿದ 321 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 47.2 ಓವರ್‌ಗಳಲ್ಲಿ ಕೇವಲ 260 ರನ್‌ಗಳಿಗೆ ಆಲೌಟಾಯಿತು. ಈ ಮೂಲಕ ಕಿವೀಸ್ ಪಡೆ 60 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಪಾಕಿಸ್ತಾನ ವಿರುದ್ಧ ಉದ್ಘಾಟನಾ ಪಂದ್ಯ ಗೆಲ್ಲುವಲ್ಲಿ ನ್ಯೂಜಿಲೆಂಡ್ ತಂಡದ ನಾಲ್ವರು ಆಟಗಾರರು ಪ್ರಮುಖ ಪಾತ್ರವಹಿಸಿದರು. ಈ ಮೂಲಕ ಗೆಲುವಿನ ಹೀರೋಗಳಾದರು. ಈ ನಾಲ್ವರು ಆಟಗಾರರು ತಮ್ಮ ಅದ್ಭುತ ಆಟದ ಮೂಲಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ತವರಿನಲ್ಲಿ ಸೋಲಿನ ರುಚಿ ತೋರಿಸಿದರು. ವಿಲ್ ಯಂಗ್ (107) ಮತ್ತು ಟಾಮ್ ಲ್ಯಾಥಮ್ (118*) ಅವರ ಅದ್ಭುತ ಶತಕಗಳ ನೆರವಿನಿಂದ ನ್ಯೂಜಿಲೆಂಡ್ ಬೃಹತ್ ಮೊತ್ತ ಕಲೆ ಹಾಕಿತು. ಈ ಇಬ್ಬರಲ್ಲದೆ, ಬೌಲಿಂಗ್‌ನಲ್ಲಿ ತಲಾ 3 ವಿಕೆಟ್ ಪಡೆದು ಮಿಂಚಿದ ನಾಯಕ ಮಿಚೆಲ್ ಸ್ಯಾಂಟ್ನರ್ ಮತ್ತು ವಿಲ್ ಒ'ರೂರ್ಕ್ ಪಾಕಿಸ್ತಾನವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.
ವಿಲ್ ಯಂಗ್ 113 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 107 ರನ್ ಗಳಿಸಿದರು. ಟಾಮ್ ಲ್ಯಾಥಮ್ 104 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 118 ರನ್ ಗಳಿಸಿ ಅಜೇಯರಾಗುಳಿದರು. ವಿಲ್ ಒ'ರೂರ್ಕ್ 9 ಓವರ್‌ಗಳಲ್ಲಿ 47 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು. ಇದಾದ ನಂತರ, ಮಿಚೆಲ್ ಸ್ಯಾಂಟ್ನರ್ 10 ಓವರ್‌ಗಳಲ್ಲಿ 66 ರನ್‌ಗಳಿಗೆ 3 ವಿಕೆಟ್‌ಗಳನ್ನು ಉರುಳಿಸಿದರು.
ಟಾಸ್ ಗೆದ್ದು ಬೌಲಿಂಗ್ ದಾಳಿಗಿಳಿದ ಪಾಕಿಸ್ತಾನ ಬೌಲರ್‌ಗಳು ಬೌಲಿಂಗ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದರು. ಪಾಕಿಸ್ತಾನ ಪರ ನಸೀಮ್ ಶಾ 10 ಓವರ್‌ಗಳಲ್ಲಿ 63 ರನ್‌ಗಳಿಗೆ 2 ವಿಕೆಟ್ ಪಡೆದರೆ, ಹ್ಯಾರಿಸ್ ರೌಫ್ 10 ಓವರ್‌ಗಳಲ್ಲಿ 83 ರನ್‌ಗಳಿಗೆ 2 ವಿಕೆಟ್‌ಗಳನ್ನು ಉರುಳಿಸಿದರು. ಈ ಇಬ್ಬರನ್ನು ಹೊರತುಪಡಿಸಿ, ನ್ಯೂಜಿಲೆಂಡ್ ವಿರುದ್ಧ ಬೇರೆ ಯಾವುದೇ ಪಾಕಿಸ್ತಾನ ಬೌಲರ್ ಮಾರಕವಾಗಿ ಕಾಣಲಿಲ್ಲ.
ಕಿವೀಸ್ ಪಡೆ ನೀಡಿದ ಗೆಲುವಿನ ಗುರಿ ಬೆನ್ನಟ್ಟಲು ಬಂದ ಪಾಕಿಸ್ತಾನ ಪರ, ಸೌದ್ ಶಕೀಲ್ 6, ಮೊಹಮ್ಮದ್ ರಿಜ್ವಾನ್ ಮೊಹಮ್ಮದ್ ರಿಜ್ವಾನ್ 3, ಫಖರ್ ಜಮಾನ್ 24, ಶಾಹೀನ್ ಅಫ್ರಿದಿ 14, ನಸೀಮ್ ಶಾ 13 ಮತ್ತು ಹ್ಯಾರಿಸ್ ರೌಫ್ 19 ರನ್ ಗಳಿಸಿ ತಂಡದ ಸೋಲಿಗೆ ಕಾರಣರಾದರು.
ಪಾಕಿಸ್ತಾನ ಪರ ಖುಸ್ದಿಲ್ ಶಾ ಅತಿ ಹೆಚ್ಚು ರನ್ ಗಳಿಸಿ ಆಟಗಾರ ಎನಿಸಿಕೊಂಡರು. ಅವರು 49 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 69 ರನ್ ಕಲೆ ಹಾಕಿದರು. ಅವರಲ್ಲದೆ ಬಾಬರ್ ಅಜಮ್ ಕೂಡ ಅರ್ಧಶತಕ ಸಿಡಿಸಿದರು. ಬಾಬರ್ 90 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 64 ರನ್ ಕಲೆ ಹಾಕಿದರು. ಸಲ್ಮಾನ್ ಅಗಾ ಕೂಡ ಉತ್ತಮ ಇನ್ನಿಂಗ್ಸ್ ಆಡಿದರು. ಆದರೆ ಅರ್ಧಶತಕ ಗಳಿಸುವ ಹೊಸ್ತಿಲಲ್ಲಿ ವಿಕೆಟ್ ಕಳೆದುಕೊಂಡರು. ಅವರು 28 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 42 ರನ್ ಗಳಿಸಿದರು.