ಮುಲ್ತಾನ್: ತವರಿನಲ್ಲಿ ಪಾಕಿಸ್ತಾನ ತಂಡದ ಸೋಲಿನ ದಂಡ ಯಾತ್ರೆ ಮುಂದುವರೆದಿದೆ. ಇತ್ತೀಚಿಗೆ ಬಾಂಗ್ಲಾ ವಿರುದ್ಧ ಸರಣಿ ಸೋಲು ಕಂಡಿದ್ದ ಪಾಕ್, ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದೆ. ಮೂರು ಟೆಸ್ಟ್ ಪಂದ್ಯಗಳ ಮೊದಲ ಟೆಸ್ಟ್‌ನಲ್ಲಿ ಪಾಕ್ ಇನಿಂಗ್ಸ್ ಹಾಗೂ 47 ರನ್‌ಗಳ ಸೋಲು ಕಂಡಿದೆ. ಈ ಮೂಲಕ ಪ್ರವಾಸಿ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಶುಕ್ರವಾರ 6 ವಿಕೆಟ್‌ಗೆ 152 ರನ್‌ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಪಾಕ್ 220 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ ಪಾಕ್ ತಂಡಕ್ಕೆ ಭರ್ಜರಿ ಪೆಟ್ಟು ನೀಡಿದೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 500ಕ್ಕೂ ಹೆಚ್ಚು ರನ್‌ಗಳನ್ನು ಕಲೆ ಹಾಕಿ ಹಲವು ತಂಡಗಳು ಸೋಲನ್ನು ಕಂಡಿವೆ. ಆದರೆ ಇಷ್ಟು ದೊಡ್ಡ ಮೊತ್ತವನ್ನು ಕಲೆ ಹಾಕಿದರೂ, ಯಾವುದೇ ತಂಡ ಇನಿಂಗ್ಸ್ ಸೋಲು ಅನುಭವಿಸಿರಲಿಲ್ಲ. ಪಾಕಿಸ್ತಾನ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 500 ಪ್ಲಸ್ ರನ್ ಗಳಿಸಿದ ಹೊರತಾಗಿಯೂ, ಇನ್ನಿಂಗ್ಸ್‌ನ ಅಂತರದಿಂದ ಸೋಲನ್ನು ಎದುರಿಸಿದ ಟೆಸ್ಟ್ ಇತಿಹಾಸದಲ್ಲಿ ಮೊದಲ ತಂಡವಾಗಿದೆ. ಪಾಕಿಸ್ತಾನದ ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ, ಮೂರು ಬ್ಯಾಟ್ಸ್‌ಮನ್‌ಗಳು ಎರಡಂಕಿ ದಾಟಲು ವಿಫಲರಾದರು.
82 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಸಲ್ಮಾನ್ ಅಘಾ ಹಾಗೂ ಅಮೀರ್ ಜಮಲ್ ಉತ್ತಮ ಜತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 146 ಎಸೆತಗಳಲ್ಲಿ 109 ರನ್ ಸಿಡಿಸಿ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿತು. ಸಲ್ಮಾನ್ ಅಘಾ ಏಳು ಬೌಂಡರಿ ನೆರವಿನಿಂದ 63 ರನ್ ಸಿಡಿಸಿದರೆ, ಅಮೀರ್ ಜಮಲ್ ಅಜೇಯ 55 ರನ್ ಸಿಡಿಸಿದರು. ಉಳಿದಂತೆ ಪಾಕ್ ತಂಡದ ಯಾವೊಬ್ಬ ಬ್ಯಾಟರ್ ಸಮಯೋಚಿತ ಬ್ಯಾಟ್ ಮಾಡುವಲ್ಲಿ ವಿಫಲರಾದರು.
ಪಾಕಿಸ್ತಾನ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದ ಅನುಭವಿ ಬೌಲರ್ ಜಾಕ್ ಲೀಚ್ ಕಾಡಿದರು. ಇವರು 6.5 ಓವರ್‌ಗಳನ್ನು ಬೌಲ್ ಮಾಡಿ 30 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಉಳಿದಂತೆ ಗಸ್ ಅಟ್ಕಿನ್ಸನ್ ಹಾಗೂ ಬ್ರೈಡನ್ ಕಾರ್ಸೆ ತಲಾ ಎರಡು ವಿಕೆಟ್ ಕಬಳಿಸಿದರು.
ಇಂಗ್ಲೆಂಡ್ ತಂಡದ ಪರ ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ಹ್ಯಾರಿ ಬ್ರೂಕ್ ಚೊಚ್ಚಲ ಟ್ರಿಪಲ್ ಸೆಂಚುರಿ ಬಾರಿಸಿದ್ದರು. ಇವರ ಕ್ಲಾಸಿಕ್ ಇನಿಂಗ್ಸ್‌ಗೆ ಈಗ ಪಂದ್ಯ ಶ್ರೇಷ್ಠ ಗರಿ ಸಂದಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ಮೊದಲ ಇನಿಂಗ್ಸ್‌ನಲ್ಲಿ 556 ರನ್ ಸೇರಿಸಿತು. ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 823 ರನ್ ಸೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಎರಡನೇ ಇನಿಂಗ್ಸ್ ಆರಂಭಿಸಿದ ಪಾಕ್ 220 ರನ್‌ಗಳಿಗೆ ಸರ್ವಪತನ ಕಂಡಿತು.