ಬಹುನಿರೀಕ್ಷಿತ 2025ರ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಆಗಿಲ್ಲ. ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದೆ. ಅಂದಿನಿಂದ ಪಿಸಿಬಿ ಮತ್ತು ಬಿಸಿಸಿಐ ನಡುವೆ ಉದ್ವಿಗ್ನತೆ ನಿರಂತರವಾಗಿ ಮುಂದುವರೆದಿದೆ. ಈ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವಂತೆ ಐಸಿಸಿ ಪಾಕಿಸ್ತಾನವನ್ನು ಕೇಳಿದೆ. ಹೈಬ್ರಿಡ್ ಮಾದರಿಯಲ್ಲಿ ಭಾರತ ತನ್ನ ಪಂದ್ಯಗಳನ್ನು ಪಾಕಿಸ್ತಾನದ ಹೊರಗೆ ಆಡಲಿದೆ.
ಹೈಬ್ರಿಡ್ ಮಾದರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇನ್ನೂ ತನ್ನ ಒಪ್ಪಿಗೆಯನ್ನು ವ್ಯಕ್ತಪಡಿಸಿಲ್ಲ. ಆದರೆ ಐಸಿಸಿ ಮುಂದೆ ಪಿಸಿಬಿ ಕೆಲವು ಷರತ್ತುಗಳನ್ನು ಹಾಕಿದೆ ಎಂದು ವರದಿ ಆಗಿದೆ. ಭಾರತ ತಂಡವು ಪಾಕಿಸ್ತಾನದಲ್ಲಿ ಯಾವುದೇ ಪಂದ್ಯವನ್ನು ಆಡಲು ಬಯಸದಿದ್ದರೆ, ತನ್ನ ತಂಡದ ಪಂದ್ಯಗಳನ್ನು ಐಸಿಸಿ ಟೂರ್ನಿಗಳಲ್ಲಿ ಭಾರತದ ಹೊರಗೆ ಇಡಬೇಕು ಎಂದು ಪಿಸಿಬಿ ಷರತ್ತು ಹಾಕಿದೆ. ಈ ಕುರಿತು ಹಲವು ಬಾರಿ ಸಭೆ ನಡೆಸಲಾಗಿದ್ದರೂ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಇದೀಗ ಈ ಸಂಪೂರ್ಣ ವಿವಾದಕ್ಕೆ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಎಂಟ್ರಿ ಕೊಟ್ಟಿದ್ದಾರೆ.

ವರದಿಗಳ ಪ್ರಕಾರ, ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುವ ವಿಷಯದ ಬಗ್ಗೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಂಪೂರ್ಣ ಬೆಂಬಲವನ್ನು ಭರವಸೆ ನೀಡಿದ್ದಾರೆ. ಈ ವಿಷಯದಲ್ಲಿ ವ್ಯವಹರಿಸುವಾಗ ದೇಶವು ತನ್ನ ಸ್ವಾಭಿಮಾನವನ್ನು ಕಾಪಾಡಿಕೊಳ್ಳಬೇಕು ಎಂದು ಷರೀಫ್ ಪಿಸಿಬಿಗೆ ಹೇಳಿದ್ದಾರೆ. ಷರೀಫ್ ಪಿಸಿಬಿಯ ಪೋಷಕರೂ ಆಗಿದ್ದಾರೆ. ಇದು ಕೇವಲ ಹಣದ ವಿಷಯವಲ್ಲ. ಸಾರ್ವಜನಿಕ ಭಾವನೆಗಳನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಅವರು ಪಿಸಿಬಿಗೆ ತಿಳಿಸಿದ್ದಾರೆ.
ನಖ್ವಿ ಭಾನುವಾರ ಷರೀಫ್‌ಗೆ ತೆರೆಮರೆಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಆದರೆ ಪಿಸಿಬಿ ಸಭೆಯ ವಿವರಗಳನ್ನು ನೀಡಲಿಲ್ಲ. 'ಈ ವಿಷಯದ ಬಗ್ಗೆ ಪಿಸಿಬಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಪ್ರಧಾನಿ ಭರವಸೆ ನೀಡಿದರು. ಪಾಕಿಸ್ತಾನದಲ್ಲಿ ಆಡಲು ಭಾರತ ನಿರಾಕರಿಸಿದ ಬಗ್ಗೆ (ಪಿಸಿಬಿ) ಅಧ್ಯಕ್ಷರು ತೆಗೆದುಕೊಂಡ ನಿಲುವನ್ನು ಶ್ಲಾಘಿಸಿದರು ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ತಂಡದ ಮಾಹಿ ನಾಯಕ ಶಾಹಿದ್ ಅಫ್ರಿದಿ ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಗ್ಗೆ ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಪಿಸಿಬಿಗೆ ಸೂಚಿಸಿದ್ದಾರೆ. ಭಾರತ ತಂಡವು ಪಾಕಿಸ್ತಾನದಲ್ಲಿ ಆಡಲು ಒಪ್ಪಿಕೊಳ್ಳುವವರೆಗೆ ಅವರು ಆಯೋಜಿಸುವ ಟೂರ್ನಿಗಳನ್ನು ಬಹಿಷ್ಕರಿಸಬೇಕು ಆಫ್ರಿದಿ ಹೇಳಿದ್ದಾರೆ. ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಿಕ್ಕಟ್ಟು ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಯ ಆಗುತ್ತಿದೆ.