
ರಾವಲ್ಪಿಂಡಿ, ಡಿಸೆಂಬರ್ 16: ಪಾದಾರ್ಪಣೆ ಮಾಡಿದ ಟೆಸ್ಟ್ ಮತ್ತು ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರನಾಗಿ ಪಾಕಿಸ್ತಾನ ಆರಂಭಿಕ ಬ್ಯಾಟ್ಸ್‌ಮನ್ ಅಬಿದ್ ಅಲಿ ಇತಿಹಾಸ ನಿರ್ಮಿಸಿದ್ದಾರೆ. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದ ಪಾಕ್-ಶ್ರೀಲಂಕಾ 1ನೇ ಟೆಸ್ಟ್‌ನಲ್ಲಿ ಅಬಿದ್ ಈ ಸಾಧನೆ ಮೆರೆದಿದ್ದಾರೆ.
ಪಾಕಿಸ್ತಾನ ಪರ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ 32ರ ಹರೆಯದ ಅಬಿದ್ ಅಲಿ, 201 ಎಸೆತಗಳಲ್ಲಿ ಅಜೇಯ 109 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಇದೇ ವರ್ಷ ದುಬೈನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಅಲಿ, ಆಸ್ಟ್ರೇಲಿಯಾ ವಿರುದ್ಧ 112 ರನ್ ಗಳಿಸಿದ್ದರು.
2009ರಲ್ಲಿ ಟೆಸ್ಟ್ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಶ್ರೀಲಂಕಾ ತಂಡದ ಆಟಗಾರರಿದ್ದ ಬಸ್ ಮೇಲೆ ಭಯೋತ್ಪಾದನಾ ದಾಳಿ ನಡೆದಿತ್ತು. ಅದಾಗಿ ಸುಮಾರು 10 ವರ್ಷಗಳ ಬಳಿಕ ಅಂದರೆ, ಇದೇ ಮೊದಲ ಬಾರಿ ಶ್ರೀಲಂಕಾ ತಂಡ ಟೆಸ್ಟ್‌ಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ, ನಾಯಕ ದಿಮುತ್ ಕರುಣ ರತ್ನೆ 59, ಧನಂಜಯ ಡೆಸಿಲ್ವಾ 102 ರನ್ ನೊಂದಿಗೆ 97 ಓವರ್‌ಗೆ 6 ವಿಕೆಟ್ ಕಳೆದು 308 ರನ್ ಮಾಡಿ ಡಿಕ್ಲೇರ್ ಘೋಷಿಸಿತ್ತು. ಇನ್ನಿಂಗ್ಸ್‌ಗೆ ಇಳಿದ ಪಾಕ್, ಅಬಿದ್ ಅಲಿ 109, ಬಾಬರ್ ಅಝಮ್ 102 ರನ್‌ನೊಂದಿಗೆ 70 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 252 ರನ್ ಗಳಿಸಿತ್ತು. ಮಳೆ ಶುರುವಾಗಿದ್ದರಿಂದ ಪಂದ್ಯ ಡ್ರಾ ಎನಿಸಲ್ಪಟ್ಟಿತು.