
ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ತಂಡಗಳ ಮಧ್ಯೆ ಈ ತಿಂಗಳಾಂತ್ಯದಲ್ಲಿ ಟಿ20 ಸರಣಿ ನಡೆಯಲಿದ್ದು ಇದಕ್ಕಾಗಿ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಖಾಯಂ ನಾಯಕ ಬಾಬರ್ ಅಜಂ, ಹ್ಯಾರಿಸ್ ರೌಫ್ ಹಾಗೂ ವೇಗಿ ಶಹೀನ್ ಶಾ ಅಫ್ರಿದಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು ಶದಬ್ ಖಾನ್ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ.
ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನ ತಂಡಗಳ ಮಧ್ಯೆ ಮಾರ್ಚ್ 25ರಿಂದ 29ರವರೆಗೆ ಮೂರು ಪಂದ್ಯಗಳ ಟಿ20 ಸರಣಿ ಆಯೋಜನೆಯಾಗಲಿದೆ. ಶಾರ್ಜಾದ ಶಾರ್ಜಾ ಕ್ರಿಎಕಟ್ ಸ್ಟೇಡಿಯಂನಲ್ಲಿ ಈ ಸರಣಿಯ ಪಂದ್ಯಗಳು ನಡೆಯಲಿದೆ. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೆಲ ಆಟಗಾರರು ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಮಡಿದ್ದು ರಾಷ್ಟ್ರೀಯ ತಂಡದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಸೈಮ್ ಅಯೂಬ್, ತಯ್ಯಬ್ ತಾಹಿರ್, ಇಹ್ಸನುಲ್ಲಾಹ್, ಸೈಮ್ ಅಯೂಬ್ ಹಾಗೂ ಜಮನ್ ಖಾನ್ ಪ್ರಸ್ತುತ ನಡೆಯುತ್ತಿರುವ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನಸೆಳೆದಿದ್ದಾರೆ. ಈ ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಮೂಲಕ ತಮ್ಮ ಪ್ರದರ್ಶನಕ್ಕೆ ಉಡುಗೊರೆ ಪಡೆದುಕೊಂಡಂತಾಗಿದೆ.
ಇನ್ನು ನಾಯಕನಾಗಿ ನೇಮಕವಾಗಿರುವ ಶದಬ್ ಖಾನ್‌ಗೆ ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ಅಭಿನಂದಿಸಿದ್ದಾರೆ. "ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಪಾಕಿಸ್ತಾನ ತಂಡದ ನಾಯಕನಾಗಿ ನೇಮಕವಾಗಿರುವ ಶದಬ್ ಖಾನ್‌ಗೆ ಅಭಿನಂದನೆಗಳು. ಕಳೆದ ಒಂದೆರಡು ವರ್ಷಗಳಿಂದ ಅವರು ಪಾಕಿಸ್ತಾನ ವೈಟ್‌ಬಾಲ್ ತಂಡದ ಉಪನಾಯಕನಾಗಿದ್ದಾರೆ. ಬಾಬರ್ ಅಜಂ ಅನುಪಸ್ಥಿತಿಯಲ್ಲಿ ಅವರನ್ನು ನಾಯಕನನ್ನಾಗಿ ನೇಮಿಸುವುದರಲ್ಲಿ ಅರ್ಥವಿದೆ" ಎಂದಿದ್ದಾರೆ ನಜಮ್ ಸೇಥಿ.
ಇನ್ನು ಮುಂಬರುವ ಈ ಸರಣಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್ ಅವರನ್ನು ಹಂಗಾಮಿ ಮುಖ್ಯ ಕೋಚ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿದೆ.
ಪಾಕಿಸ್ತಾನ ಸ್ಕ್ವಾಡ್ ಹೀಗಿದೆ "ಶದಬ್ ಖಾನ್ (ನಾಯಕ), ಅಬ್ದುಲ್ಲಾ ಶಫೀಕ್, ಅಜಮ್ ಖಾನ್, ಫಹೀಮ್ ಅಶ್ರಫ್, ಇಫ್ತಿಕರ್ ಅಹ್ಮದ್, ಇಹ್ಸಾನುಲ್ಲಾ, ಇಮಾದ್ ವಾಸಿಮ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಸೈಮ್ ಅಯೂಬ್, ಶಾನ್ ಮಸೂದ್, ತಯ್ಯಬ್ ತಾಹಿರ್, ಜಮಾನ್ ಖಾನ್
ಮೀಸಲು ಆಟಗಾರರು: ಹಸೀಬುಲ್ಲಾ, ಉಸಾಮಾ ಮಿರ್, ಅಬ್ರಾರ್ ಅಹ್ಮದ್