ಮಂಗಳವಾರ, ಅಕ್ಟೋಬರ್ 10ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ ಬೃಹತ್ ಗುರಿ ಬೆನ್ನಟ್ಟಿ ವಿಶ್ವಕಪ್‌ನಲ್ಲಿ ದಾಖಲೆ ನಿರ್ಮಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಕುಸಲ್ ಮೆಂಡೀಸ್ ಮತ್ತು ಸದೀರ ಸಮರವಿಕ್ರಮ ಅವರ ಅಮೋಘ ಶತಕದ ನೆರವಿನಿಂದ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 344 ರನ್ ಕಲೆಹಾಕಿತ್ತು.

345 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 48.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಮೊದಲ ತಂಡವೆನಿಸಿತು.
ಅಲ್ಲದೆ, ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯವು ವಿಶ್ವಕಪ್ ಇತಿಹಾಸದಲ್ಲಿ ಮತ್ತೊಂದು ದಾಖಲೆಗೆ ಸಾಕ್ಷಿಯಾಯಿತು. ವಿಶ್ವಕಪ್‌ನ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಶತಕಗಳು ದಾಖಲಾಗಿದ್ದು ಇದೇ ಮೊದಲ ನಿದರ್ಶನವಾಗಿದೆ.
ಶ್ರೀಲಂಕಾ ತಂಡದ ಪರ ಕುಸಲ್ ಮೆಂಡಿಸ್ ಮತ್ತು ಸದೀರ ಸಮರವಿಕ್ರಮ ಶತಕ ಬಾರಿಸಿದರೆ, ಪಾಕಿಸ್ತಾನ ತಂಡದ ಪರ ಅಬ್ದುಲ್ಲಾ ಶಫೀಕ್ ಮತ್ತು ಮುಹಮ್ಮದ್ ರಿಜ್ವಾನ್ ಶತಕ ಸಿಡಿಸಿ ದಾಖಲೆಗೆ ಕಾರಣರಾದರು.

ಪಾಕಿಸ್ತಾನ ತಂಡದ ಅಬ್ದುಲ್ಲಾ ಶಫೀಕ್ 103 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ಮೂಲಕ 113 ರನ್ ಗಳಿಸಿದರೆ, ಮೊಹಮ್ಮದ್ ರಿಜ್ವಾನ್ 121 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 131 ರನ್ ಬಾರಿಸಿ ಗೆಲುವಿನ ರೂವಾರಿಯಾದರು.
ಶ್ರೀಲಂಕಾ ತಂಡದ ಕುಸಲ್ ಮೆಂಡೀಸ್ 77 ಎಸೆತಗಳಲ್ಲಿ 14 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 122 ರನ್‌ಗಳ ಭರ್ಜರಿ ಶತಕ ಸಿಡಿಸಿದರು. ಸದೀರ ಸಮರವಿಕ್ರಮ 89 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 108 ರನ್ ಗಳಿಸಿದರು.
ಇದಕ್ಕೂ ಮುನ್ನ 1998ರಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಮತ್ತು 2013ರಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಒಂದೇ ಪಂದ್ಯದಲ್ಲಿ ನಾಲ್ಕು ಶತಕಗಳನ್ನು ದಾಖಲಾಗಿದ್ದವು. ಆದರೆ, ವಿಶ್ವಕಪ್‌ನಲ್ಲಿ ಇದು ಮೊದಲಾಗಿದೆ.
1998ರ ಪಂದ್ಯದಲ್ಲಿ ಪಾಕಿಸ್ತಾನದ ಇಜಾಜ್ ಅಹ್ಮದ್ ಮತ್ತು ಮೊಹಮ್ಮದ್ ಯೂಸುಫ್ ಶತಕ ಬಾರಿಸಿದ್ದರೆ, ಆಸ್ಟ್ರೇಲಿಯಾ ಪರ ಆಡಮ್ ಗಿಲ್‌ಕ್ರಿಸ್ಟ್ ಮತ್ತು ರಿಕಿ ಪಾಂಟಿಂಗ್ ಶತಕಗಳನ್ನು ಸಿಡಿಸಿದ್ದರು.
2013ರಲ್ಲಿ ಭಾರತದ ಪರ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಶತಕ ಗಳಿಸಿ ಮಿಂಚಿದರೆ, ಆಸ್ಟ್ರೇಲಿಯಾ ಪರ ಜಾರ್ಜ್ ಬೈಲಿ ಮತ್ತು ಶೇನ್ ವ್ಯಾಟ್ಸನ್ ಮೂರಂಕಿ ಗಡಿ ದಾಟಿದ್ದರು.