
ಸೀಮಿತ ಓವರ್‌ಗಳ ಸರಣಿಯನ್ನಾಡಲು ಪಾಕಿಸ್ತಾನಕ್ಕೆ ಬಂದಿರುವ ಜಿಂಬಾಬ್ವೆ ತಂಡ ಮೊದಲ ಏಕದಿನ ಪಂದ್ಯದಲ್ಲಿ ತೀವ್ರ ಪೈಪೋಟಿ ನೀಡಿ ಶರಣಾಗಿದೆ. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ನಡೆಸಿ 281 ರನ್ ದಾಖಲಿಸಿತು. ಇದನ್ನು ದಿಟ್ಟವಾಗಿಯೇ ಬೆನ್ನಟ್ಟಿದ ಜಿಂಬಾಬ್ವೆ ಅಂತಿಮ ಹಂತದಲ್ಲಿ ಎಡವಟ್ಟು ಮಾಡಿಕೊಂಡು ಶರಣಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನಕ್ಕೆ ಇಮಾಮ್ ಉಲ್ ಹಕ್ ಹಾಗೂ ಹ್ಯಾರಿಸ್ ಸೋಹೈಲ್ ಸವಾಲಿನ ಮೊತ್ತವನ್ನು ದಾಖಲಿಸಲು ನೆರವಾಯಿತು. ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಪಾಕಿಸ್ತಾನ 281 ರನ್ ದಾಖಲಿಸಿದೆ. ಇಮಾಮ್ ಉಲ್ ಹಕ್ 58 ರನ್ ಗಳಿಸಿದರೆ ಹ್ಯಾರಿಸ್ ಸೋಹೈಲ್ 71 ರನ್ ದಾಖಲಿಸಿದರು.
ಜಿಂಬಾಬ್ವೆ ತಂಡ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿತು. ಬೌಲಿಂಗ್‌ನಲ್ಲಿ ಮುಜರಬಾನಿ ಹಾಗೂ ಟೆಂಡೈ ಚಿಸೊರೊ ತಲಾ ಎರಡು ವಿಕೆಟ್ ಪಡೆದರು. ಮುಂಬಾ ಹಾಗೂ ರಾಜಾ ತಲಾ ಒಂದು ವಿಕೆಟ್ ಪಡೆದರು. ಎರಡು ರನ್‌ಔಟ್ ಮಾಡುವಲ್ಲಿಯೂ ಜಿಂಬಾಬ್ವೆ ಆಟಗಾರರು ಯಶಸ್ವಿಯಾದರು.
ಪಾಕಿಸ್ತಾನ ನೀಡಿದ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡಕ್ಕೆ ಉತ್ತಮ ಆರಂಭ ದೊರೆಯುವಲ್ಲಿ ವಿಫಲವಾದರೂ ಮಧ್ಯಮ ಕ್ರಮಾಂಕದ ಪ್ರದರ್ಶನ ಶ್ರೇಷ್ಠವಾಗಿತ್ತು. ಬ್ರೆಂಡನ್ ಟೇಯ್ಲರ್, ಕ್ರೇಗ್ ಇರ್ವೀನ್ ಹಾಗೂ ವೇಸ್ಲೇ ಮಾಧೇವೆರೆ ಪ್ರದರ್ಶನ ಪಾಕ್‌ಗೆ ಸೋಲಿನ ಭೀತಿಯನ್ನೂ ಉಂಟು ಮಾಡಿತು. ಬ್ರೆಂಡನ್ ಟೇಯ್ಲರ್ 112 ರನ್ ಸಿಡಿಸಿದರೆ ವೇಸ್ಲೆ 55 ರನ್ ದಾಖಲಿಸಿದರು ಹಾಗೂ ಈರ್ವಿನ್ 41 ರನ್ ದಾಖಲಿಸಿದರು.
ಬ್ರೆಂಡನ್ ಟೇಯ್ಲರ್ ಹಾಗೂ ವೇಸ್ಲೆ 5ನೇ ವಿಕೆಟ್‌ಗೆ 115 ರನ್‌ಗಳ ಜೊತೆಯಾಟವಾಗಿ ಗೆಲುವಿನ ಸನಿಹಕ್ಕೆ ತಂದಿಟ್ಟರು, ಆದರೆ ಈ ಜೋಡಿ ಬೇರ್ಪಟ್ಟ ನಂತರ ಪ್ರವಾಸಿ ಜಿಂಬಾಬ್ವೆ ಹಠಾತ್ ಕುಸಿತಕ್ಕೆ ಸಾಕ್ಷಿಯಾಯಿತು. 49.4 ಓವರ್‌ಗೆ 255 ರನ್‌ಗಳಿಸಿ ಆಲ್‌ಔಟ್ ಆಗುವ ಮೂಲಕ 26 ರನ್‌ಗಳಿಗೆ ಜಿಂಬಾಬ್ವೆ ಶರಣಾಯಿತು.