ಪಾಕಿಸ್ತಾನ ತಂಡದ ನಾಯಕನಾಗಿ ಮೊಹಮ್ಮದ್ ರಿಜ್ವಾನ್ ತಮ್ಮ ಮೊದಲ ಅಧಿಕಾರವಧಿಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡವು ತವರಿನಲ್ಲಿ ಆಸ್ಟ್ರೇಲಿಯಾವನ್ನು ಏಕದಿನ ಸರಣಿಯಲ್ಲಿ ಸೋಲಿಸುವ ಅದ್ಭುತ ದಾಖಲೆ ಮಾಡಿದೆ. 22 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ಗೆದ್ದು ಸಂಭ್ರಮಿಸಿದೆ. 2002ರಲ್ಲಿ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ಪಾಕಿಸ್ತಾನ ಕೊನೆಯ ಬಾರಿಗೆ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಮೊದಲ ಪಂದ್ಯವನ್ನು ಸೋತ ಪಾಕಿಸ್ತಾನ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಬೀಗಿದೆ.
ಪರ್ತ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯವನ್ನು ಪಾಕಿಸ್ತಾನ 8 ವಿಕೆಟ್‌ಗಳಿಂದ ಗೆದ್ದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಕೇವಲ 140 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನದ ಬೌಲರ್‌ಗಳಾದ ಶಾಹೀನ್ ಅಫ್ರಿದ್ ಮತ್ತು ನಸೀಮ್ ಶಾ ತಲಾ 3 ವಿಕೆಟ್ ಪಡೆದರೆ, ಕಳೆದ ಪಂದ್ಯದಲ್ಲಿ 5 ವಿಕೆಟ್ ಪಡೆದಿದ್ದ ಹ್ಯಾರಿಸ್ ರೌಫ್ ಈ ಪಂದ್ಯದಲ್ಲಿ ಕೇವಲ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಆಸ್ಟ್ರೇಲಿಯಾ ಪರ ಶಾನ್ ಅಬಾಟ್ 30 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಆದರು. ಮತ್ತೊಂದೆಡೆ ಮ್ಯಾಥ್ಯೂ ಶಾರ್ಟ್ ಕೂಡ 22 ರನ್ ಗಳ ಕೊಡುಗೆ ನೀಡದರು.

141 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಪಾಕಿಸ್ತಾನ ಪರ ಸೈಮ್ ಅಯೂಬ್ ಮತ್ತು ಅಬ್ದುಲ್ಲಾ ಶಫೀಕ್ ಇನಿಂಗ್ಸ್ ಆರಂಭಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 84 ರನ್ ಸೇರಿಸಿದರು. ಉತ್ತಮ ಆಟವಾಡುತ್ತಿದ್ದ ಅಬ್ದುಲ್ಲಾ ಶಫೀಕ್ 37 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಇದಾದ ಬಳಿಕ ಸೈಮ್ ಅಯೂಬ್ ಕೂಡ 42 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಬಾಬರ್ ಅಜಮ್ ಅಜೇಯ 28 ಮತ್ತು ನಾಯಕ ಮೊಹಮ್ಮದ್ ರಿಜ್ವಾನ್ 30 ರನ್ ಕಲೆ ಹಾಕಿದರು. ಇದರೊಂದಿಗೆ ಪಾಕಿಸ್ತಾನ 2 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ 8 ವಿಕೆಟ್ ಗಳಿಂದ ಪಂದ್ಯವನ್ನು ತಮ್ಮದಾಗಿಸಿಕೊಂಡಿತ್ತು.
ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 203 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಅದ್ಭುತ ಪುನರಾಗಮನ ಮಾಡಿತು. 163 ರನ್‌ಗಳ ಬೆನ್ನಟ್ಟಿದ ಕಾಂಗರೂ ಪಡೆ ಪಾಕಿಸ್ತಾನ ಎದುರು ಮಂಡಿಯೂರಿತ್ತು. ಮೂರನೇ ಪಂದ್ಯದಲ್ಲಿ 140 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ 8 ವಿಕೆಟ್‌ಗಳ ಜಯ ಸಾಧಿಸಿದೆ. ಇದೀಗ ನವೆಂಬರ್ 14 ರಿಂದ ಆರಂಭವಾಗಲಿರುವ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವತ್ತ ಪಾಕಿಸ್ತಾನದ ಕಣ್ಣು ನೆಟ್ಟಿದೆ.