ಭಾರತದಲ್ಲಿ ಏಕದಿನ ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಮಹಾನ್ ಕ್ರಿಕೆಟ್ ಹಬ್ಬಕ್ಕಾಗಿ ಎಲ್ಲ ದೇಶಗಳು ಭರ್ಜರಿ ತಯಾರಿ ನಡೆಸಿವೆ. ಈ ಬಾರಿ ಶತಾಯಗತಾಯ ಕಪ್ ಗೆಲ್ಲಲೇ ಬೇಕೆಂದು ಪಣವನ್ನು ತೊಟ್ಟೇ, ಭಾರತದ ವಿಮಾನ ಏರಲಿವೆ. ವಿಶ್ವದ ನಾನಾ ಆಟಗಾರರಿಗೆ ಭಾರತ ಎರಡನೇ ತವರು ಎಂದರೇ ತಪ್ಪಾಗಲಾರದು.
ಹೌದು, ಭಾರತದಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿಶ್ವದ ಸ್ಟಾರ್ ಆಟಗಾರರು ಭಾಗವಹಿಸುತ್ತಾರೆ. ಇಲ್ಲಿ ಆಡಿ ಸಖತ್ ಫೇಮಸ್ ಆಗ್ತಾರೆ. ಅಲ್ಲದೆ ಜೇಬು ತುಂಬ ಹಣವನ್ನು ತುಂಬಿಕೊಳ್ಳುತ್ತಾರೆ. ಇದರ ಜೊತೆಗೆ ಆ ದೇಶದ ಆಟಗಾರರಿಗೆ ಮತ್ತೊಂದು ಅಂಶ ಸಹಾಯಕ್ಕೆ ಬರಲಿದೆ. ಅದೇ ಇಲ್ಲಿನ ಪಿಚ್ ಗಳ ಮರ್ಮವನ್ನು ಅವರು ಮೊದಲೇ ತಿಳಿದುಕೊಂಡಿರುತ್ತಾರೆ.

ಭಾರತದ ಬಹುತೇಕ ರಾಜ್ಯಗಳ ಹವಾಮಾನದ ಪರಿಚಯ ಇರುತ್ತದೆ. ಯಾವ ಮೈದಾನದಲ್ಲಿ ಹೇಗೆ ಆಡಬೇಕು ಎನ್ನುವ ಅಂದಾಜು ಇರುತ್ತದೆ. ಅಲ್ಲದೆ ಈ ದೇಶವನ್ನು ಹಲವು ಕ್ರಿಕೆಟ್ ಆಟಗಾರರು ತಮ್ಮ ಎರಡನೇ ತವರು ಎಂದು ಹೇಳಿದ್ದು ಇದೆ. ಹೀಗಾಗಿ ಭಾರತದಲ್ಲಿ ವಿಶ್ವಕಪ್ ನಡೆದರೆ, ತಮ್ಮ ದೇಶದಲ್ಲೇ ಆಡಿದಷ್ಟು ಖುಷಿಯನ್ನು ವಿದೇಶಿ ಆಟಗಾರರು ಪಡುತ್ತಾರೆ.
ಆದರೆ, ಪಾಕಿಸ್ತಾನದ ಬಹುತೇಕ ಆಟಗಾರರು ಇದೇ ಮೊದಲ ಬಾರಿಗೆ ಭಾರತಕ್ಕೆ ಪ್ರವಾಸವನ್ನು ಮಾಡುತ್ತಿದ್ದಾರೆ. ಅಲ್ಲದೆ ಇಲ್ಲಿನ ಪರಿಸ್ಥಿತಿ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ. ಉಭಯ ದೇಶಗಳ ನಡುವೆ ದ್ವೀಪಕ್ಷಿಯ ಕ್ರಿಕೆಟ್ ಪಂದ್ಯಗಳು ನಿಂತ ಬಳಿಕ ಪಾಕ್ ಆಟಗಾರರು ಭಾರತಕ್ಕೆ ಪ್ರವಾಸವನ್ನೇ ಬೆಳೆಸಿಲ್ಲ. ಇನ್ನು ಐಪಿಎಲ್‌ನ ಆರಂಭದ ಆವೃತ್ತಿಗಳನ್ನು ಹೊರತು ಪಡಿಸಿದರೆ, ಬೇರೆ ಆವೃತ್ತಿಗಳಲ್ಲಿ ಪಾಕ್ ಆಟಗಾರರಿಗೆ ಬಿಸಿಸಿಐ ಅವಕಾಶವನ್ನು ನೀಡಲಿಲ್ಲ. ಹೀಗಾಗಿ ಪಾಕಿಸ್ತಾನ ಆಟಗಾರರಿಗೆ ಭಾರತದಲ್ಲಿ ಆಡುವುದು ಕಬ್ಬಿಣದ ಕಡಲೇ ಎನ್ನುವಂತಾಗಿದೆ.
ಎರಡೂ ದೇಶಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ. ಇದನ್ನು ಹೊರತು ಪಡಿಸಿದರೆ, ಈ ಎರಡೂ ದೇಶಗಳ ನಡುವೆ ಸರಣಿಗಳು ಬಹು ವರ್ಷಗಳಿಂದ ನಡೆದಿಲ್ಲ. ಹೀಗಾಗಿ ಭಾರತದಲ್ಲಿ ಆಡುವುದು ನಿಜಕ್ಕೂ ಪಾಕ್ ಆಟಗಾರರಿಗೆ ಕಠಿಣವಾಗಿದೆ. ಇನ್ನು 2016ರ ಟಿ20 ವಿಶ್ವಕಪ್ ಬಳಿಕ ಪಾಕ್ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿದೆ.
ಎರಡೂ ದೇಶಗಳ ನಡುವಿನ ರಾಜಕೀಯ ಭಿನ್ನಭಿಪ್ರಾಯಕ್ಕೆ ಕ್ರಿಕೆಟ್ ಬಲಿಯಾಗಿದೆ. ಇನ್ನು ಈ ಬಾರಿ ಏಷ್ಯಾ ಕಪ್ ಆತಿಥ್ಯವನ್ನು ಪಾಕಿಸ್ತಾನ ವಹಿಸಿತ್ತು. ಆದರೆ, ಪಾಕ್ ನಲ್ಲಿ ಹೋಗಿ ಆಡಲು ಬಿಸಿಸಿಐ ಹಿಂದೇಟು ಹಾಕಿದ್ದರಿಂದಲೇ ಜಂಟಿ ಆತಿಥ್ಯಕ್ಕೆ ಒಪ್ಪಿಗೆ ನೀಡಲಾಯಿತು. ಶ್ರೀಲಂಕಾ ಹಾಗೂ ಪಾಕ್ ಆಶ್ರಯದಲ್ಲಿ ನಡೆದ ಏಷ್ಯಾ ಕಪ್ ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಪಾಕಿಸ್ತಾನದ ಬಹುತೇಕ ಆಟಗಾರರಿಗೆ ಇಲ್ಲಿನ ಪಿಚ್ ಹಾಗೂ ಕಂಡೀಷನ್ ಬಗ್ಗೆ ಅರಿವೇ ಇಲ್ಲದ ಕಾರಣ ಅವರು ತೊಂದರೆ ಪಡಲಿದ್ದಾರೆ. ಹೀಗಾಗಿ ಈ ಬಾರಿ ವಿಶ್ವಕಪ್ ನಲ್ಲಿ ಪಾಕ್ ತನ್ನ ತಾಕತ್ತು ಪ್ರದರ್ಶಿಸಲು ಮುಂದಾಗಿದೆ.