2023ರ ಏಕದಿನ ವಿಶ್ವಕಪ್ ಪಂದ್ಯಾವಳಿ ಆರಂಭಕ್ಕೆ ಕೇವಲ ಒಂದು ತಿಂಗಳು ಮಾತ್ರ ಉಳಿದಿದೆ. ಭಾಗವಹಿಸುವ ಎಲ್ಲಾ ಹತ್ತು ತಂಡಗಳು ಐಸಿಸಿ ಟೂರ್ನಿಗಾಗಿ ತಮ್ಮ ತಂಡವನ್ನು ಅಂತಿಮಗೊಳಿಸುತ್ತಿವೆ.
ಇನ್ನು ಭಾರತ ಕ್ರಿಕೆಟ್ ತಂಡವು ವಿಶ್ವಕಪ್‌ನಲ್ಲಿ ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸುವುದರೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ. ಇನ್ನು ಅಕ್ಟೋಬರ್ 14ರಂದು ಅಹಮದಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ ಹೈ-ವೋಲ್ಟೇಜ್ ಪಂದ್ಯದಲ್ಲಿ ಸೆಣಸಾಡಲಿದೆ.
ಇದಕ್ಕೂ ಮುನ್ನ ಆಗಸ್ಟ್ 30ರಿಂದ ಆರಂಭವಾಗಲಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ ಉಭಯ ತಂಡಗಳು ಕಾದಾಡಲು ಸಜ್ಜಾಗಿವೆ.

ಇನ್ನು ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು. ಅವರ ಅತ್ಯದ್ಭುತ ವೃತ್ತಿಜೀವನದ ಮೂಲಕ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಕ್ರಿಕೆಟ್ ಆಡುವ ಸಮಯದಲ್ಲಿ ವಿರಾಟ್ ಕೊಹ್ಲಿ ಎಲ್ಲರ ಕಣ್ಣುಗಳು ತಮ್ಮತ್ತ ಸೆಳೆಯುವಂತಹ ವ್ಯಕ್ತಿಯಾಗಿದ್ದಾರೆ.
ಐಪಿಎಲ್, ಟೆಸ್ಟ್, ಏಕದಿನ ಅಥವಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಾಗಿರಲಿ, ಕ್ರಿಕೆಟ್‌ನ ಪ್ರತಿಯೊಂದು ಸ್ವರೂಪದಲ್ಲೂ ವಿರಾಟ್ ಕೊಹ್ಲಿ ಮಿಂಚಿದ್ದಾರೆ. ಉತ್ಸಾಹಭರಿತ ಆಟವು ಅವರನ್ನು ವಿಶೇಷ ಆಟಗಾರನನ್ನಾಗಿ ಮಾಡುತ್ತದೆ.
34 ವರ್ಷದ ಬಲಗೈ ಬ್ಯಾಟರ್ ವಿರಾಟ್ ಕೊಹ್ಲಿ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಅವರ ಅಭಿಮಾನಿಗಳ ಗಡಿ ಸೀಮಿತವಾಗಿಲ್ಲ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಲ್ಲೂ ಹೆಚ್ಚಿನ ಅಭಿಮಾನಿಗಳಿರುವುದು ಎಲ್ಲರಿಗೂ ತಿಳಿದಿದೆ.

ಪಾಕಿಸ್ತಾನ ತಂಡದ ಸೂಪರ್ ಅಭಿಮಾನಿ 'ಚಾಚಾ ಕ್ರಿಕೆಟ್' ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತನ್ನ ನೆಚ್ಚಿನ ಬ್ಯಾಟರ್ ಎಂದು ಬಹಿರಂಗಪಡಿಸಿದ್ದಾರೆ.
"ಪ್ರಸ್ತುತ ಯುಗದಲ್ಲಿ, ಅದು ವಿರಾಟ್ ಕೊಹ್ಲಿ" ಎಂದು ಚಾಚಾ ಕ್ರಿಕೆಟ್ ಅವರು ನಾದಿರ್ ಅಲಿ ಯೂಟ್ಯೂಬ್ ಕಾರ್ಯಕ್ರಮದಲ್ಲಿ ನಾದಿರ್ ಅಲಿಗೆ ಹೇಳಿದರು.
"ವಿರಾಟ್ ಕೊಹ್ಲಿ ಪ್ರಸ್ತುತ ಅತ್ಯಂತ ದೊಡ್ಡ ಆಟಗಾರ. ಕೊಹ್ಲಿ ಹೊಡೆಯುವ ವೇಗವು ಇತರ ಆಟಗಾರರಿಗಿಂತ ಭಿನ್ನವಾಗಿದೆ. ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಹೊಗಳಿದ ಚಾಚಾ ಕ್ರಿಕೆಟ್, ಪಾಕಿಸ್ತಾನದ ಆಟಗಾರರು ವಿರಾಟ್ ಕೊಹ್ಲಿಗಿಂತ ಉತ್ತಮವಾಗಿ ಆಡಬೇಕೆಂದು ನಾನು ಬಯಸುತ್ತೇನೆ," ಎಂದು ಹೇಳಿದರು.
ಏಷ್ಯಾ ಕಪ್ ಪಂದ್ಯಾವಳಿಗೂ ಮುನ್ನ ವಿರಾಟ್ ಕೊಹ್ಲಿ ತಮ್ಮ ಕಠಿಣ ತರಬೇತಿಗೆ ಮರಳಿದ್ದಾರೆ. ಭಾರತ ತಂಡದ ಮಾಜಿ ನಾಯಕ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಆಡಿದರೆ, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮಾತ್ರ ಕಾಣಿಸಿಕೊಂಡರು.
ಆ ಬಳಿಕ ಉಳಿದ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದರು. ನಂತರ ಕೆರಿಬಿಯನ್ ವಿರುದ್ಧದ ಟಿ20 ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಇತರ ಕೆಲವು ಹಿರಿಯ ಆಟಗಾರರನ್ನು ಆಯ್ಕೆ ಮಾಡಲಾಗಿರಲಿಲ್ಲ ಎಂಬುದು ಗಮನಾರ್ಹ ಸಂಗತಿ.
ಆಗಸ್ಟ್ 30ರಂದು ಆರಂಭವಾಗಲಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಕೆಲವು ಹಿರಿಯ ಆಟಗಾರರು ಮತ್ತೆ ಭಾರತೀಯ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಿಸಿಸಿಐ ಇನ್ನೂ ಏಷ್ಯಾ ಕಪ್ ಪಂದ್ಯಾವಳಿಗೆ ಭಾರತ ತಂಡವನ್ನು ಪ್ರಕಟಿಸಿಲ್ಲ. ಈಗಾಗಲೇ ಹಲವು ಆಟಗಾರರು ತಮ್ಮ ತಯಾರಿಯನ್ನು ಪ್ರಾರಂಭಿಸಿದ್ದಾರೆ.
ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಡಲಾಗುತ್ತಿದೆ. ಮೊದಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡಲಿದ್ದರೆ, ಭಾರತ ಮತ್ತು ಫೈನಲ್ ಸೇರಿದಂತೆ ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.