ಎಬಿ ಡಿವಿಲಿಯರ್ಸ್ ಬಳಿಯಿದ್ದ ಆ ವಿಶೇಷ ಸಾಮರ್ಥ್ಯ ಈ ಭಾರತೀಯನಲ್ಲಿದೆ ಎಂದ ಮಾಜಿ ಕ್ರಿಕೆಟಿಗ

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ರನ್ ಬೆನ್ನಟ್ಟಿದ ಭಾರತ ತಂಡದ ಪರವಾಗಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಆಟಗಾರ ಸೂರ್ಯಕುಮಾರ್ ಯಾದವ್. 44 ಎಸೆತಗಳಲ್ಲಿ 76 ರನ್‌ಗಳಿಸುವ ಮೂಲಕ ಭಾರತ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸುವಂತೆ ಮಾಡಿದ್ದಾರೆ ಸೂರ್ಯಕುಮಾರ್ ಯಾದವ್.
ಈ ಅದ್ಭುತ ಪ್ರದರ್ಶನದ ಬಳಿಕ ಸೂರ್ಯಕುಮಾರ್ ಯಾದವ್ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ. ಆರಂಭಿಕನಾಗಿ ಮೊದಲ ಎರಡು ಪಂದ್ಯಗಳಲ್ಲಿ ಸೂರ್ಯ ವೈಫಲ್ಯ ಅನುಭವಿಸಿದ ಬಳಿಕ ಮ್ಯಾನೇಜ್‌ಮೆಂಟ್ ಮೇಲೆ ಸಾಕಷ್ಟು ಟೀಕೆಗಳು ಕೇಳಿ ಬಂದಿತ್ತು. ಆದರೆ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರವನ್ನು ಸೂರ್ಯಕುಮಾರ್ ಯಾದವ್ ಮೂರನೇ ಪಂದ್ಯದಲ್ಲಿ ಹುಸಿಗೊಳಿಸಿಲ್ಲ. ಈ ಬಗ್ಗೆ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಮಾತನಾಡಿದ್ದು ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ಗೆ ಸೂರ್ಯಕುಮಾರ್ ಯಾದವ್ ಅವರನ್ನು ಹೋಲಿಸಿದ್ದಾರೆ.

ಆತ್ಮವಿಶ್ವಾಸವಿದ್ದರೆ ಮಾತ್ರ ಅಂಥಾ ಹೊಡೆತ ಸಾಧ್ಯ
ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್‌ನ ಕೌಶಲ್ಯದ ಬಗ್ಗೆ ಪಾರ್ಥಿವ್ ಪಟೇಲ್ ವಿಶೇಷ ಮಾತುಗಳನ್ನಾಡಿದ್ದಾರೆ. "ಸೂರ್ಯಕುಮಾರ್ ಯಾದವ್ ಅತ್ಯಂತ ಅಪಾಯಕಾರಿ ಶಾಟ್‌ಗಳನ್ನು ಎಲ್ಲರಿಗಿಂತ ಅದ್ಭುತವಾಗಿ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಇಂಥಾ ಅವಕಾಶಗಳನ್ನು ನೀವು ನಿಮ್ಮಲ್ಲಿ ಆ ಮಟ್ಟದ ಆತ್ಮವಿಶ್ವಾಸವಿದ್ದಾಗ ಮಾತ್ರವೇ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆ ಸಾಮರ್ಥ್ಯ ಸೂರ್ಯಕುಮಾರ್ ಯಾದವ್ ಅವರಲ್ಲಿದೆ" ಎಂದಿದ್ದಾರೆ ಪಾರ್ಥೀವ್ ಪಟೇಲ್.

ಎಬಿ ಡಿವಿಲಿಯರ್ಸ್ ರೀತಿ ಆಡುತ್ತಿದ್ದಾರೆ
ಮುಂದುವರಿದು ಮಾತನಾಡಿದ ಪಾರ್ಥಿವ್ ಪಟೇಲ್ ಸೂರ್ಯಕುಮಾರ್ ಯಾದವ್ ಅವರ ಮನಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. "ಎದುರಾಳಿ ಯಾವುದೇ ರೀತಿಯ ಬೌಲಿಂಗ್ ಮಾಡಲಿ, ನಾನು ಫೀಲ್ಡ್‌ಗೆ ತಕ್ಕನಾಗಿ ಆಡುತ್ತೇನೆ, ಬೌಲರ್‌ಗೆ ತಕ್ಕಂತೆ ಅಲ್ಲ. ಇದನ್ನೇ ಈ ಹಿಂದೆ ಎಬಿ ಡಿವಿಲಿಯರ್ಸ್ ಮಾಡುತ್ತಿದ್ದರು. ಅವರು ಯಾವಾಗಲೂ ಚೆಂಡನ್ನೇ ಗಮನಿಸುತ್ತಿದ್ದರು ಹಾಗೂ ಮೊದಲೇ ಸ್ಥಾನಕ್ಕೆ ಬರುತ್ತಿದ್ದರು. ಈ ವಿಶೇಷ ಸಾಮರ್ಥ್ಯ ಸೂರ್ಯಕುಮಾರ್ ಅವರಲ್ಲಿ ಇದೆ" ಎಂದು ಎಬಿ ಡಿವಿಲಿಯರ್ಸ್‌ಗೆ ಹೋಲಿಸಿ ಮಾತನಾಡಿದ್ದಾರೆ ಪಾರ್ಥಿವ್ ಪಟೇಲ್.

ಮೊದಲ ಎರಡು ಪಂದ್ಯಗಳಲ್ಲಿ SKY ವಿಫಲ
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಈ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಸೈರ್ಯ ಬ್ಯಾಟ್‌ನಿಂದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ. ಎರಡು ಪಂದ್ಯಗಳಲ್ಲಿ ಕೇವಲ 35 ರನ್ ಮಾತ್ರವೇ ಗಳಿಸಲು ಸಾಧ್ಯವಾಗಿತ್ತು. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಅದ್ಭುತವಾಗಿ ಆಡುತ್ತಿದ್ದ ಸೂರ್ಯಕುಮಾರ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿ ಗೊಂದಲ ಮೂಡಿಸಲಾಗುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಸೂರ್ಯಕುಮಾರ್ ಯಾದವ್ ಮೂರನೇ ಪಂದ್ಯದಲ್ಲಿ ತಮ್ಮ ಅದ್ಭುತ ಪ್ರದರ್ಶನ ನಿಡುವ ಮೂಲಕ ತಾನು ಆರಂಬಿಕನಾಗಿಯೂ ಸೈ ಎನಿಸಬಲ್ಲೆ ಎಂದು ಸಾಬೀತುಪಡಿಸಿದ್ದಾರೆ.

ಸರಣಿಯಲ್ಲಿ ಭಾರತಕ್ಕೆ ಮುನ್ನಡೆ
ಇನ್ನು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಈಗ ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ರೋಚಕ ಸೆಣೆಸಾಟದ ಬಳಿಕ ಸೋಲು ಕಂಡಿತ್ತು. ಇನ್ನು ಮೂರನೇ ಪಂದ್ಯದಲ್ಲಿ ಭಾರತ ತಂಡ ಎದುರಾಳಿಗೆ ಯಾವುದೇ ಅವಕಾಶ ನೀಡದಂತೆ ಅದ್ಭುತ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications