PBKS vs CSK IPL 2025: ಪ್ರಿಯಾಂಶ್ ಆರ್ಯ ಅಬ್ಬರದ ಶತಕ: ಗೆಲುವಿನ ಟ್ರ್ಯಾಕ್‌ಗೆ ಪಂಜಾಬ್, ಸಿಎಸ್‌ಕೆಗೆ ಶಾಕ್
ಯುವ ಆಟಗಾರ ಪ್ರಿಯಾಂಶ್ ಆರ್ಯ ಬಾರಿಸಿದ ಸ್ಫೋಟಕ ಶತಕದ ಹಾಗೂ ಶಶಾಂಕ್ ಸಿಂಗ್ ಬಾರಿಸಿದ ಅರ್ಧಶತಕದ ಬಲದಿಂದ ಪಂಜಾಬ್ ಕಿಂಗ್ಸ್ ತವರಿನಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ. ನ್ಯೂ ಚಂಡೀಗಡ್‌ನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಆರ್ಭಟಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಟ್ರ್ಯಾಕ್‌ಗೆ ಮರಳುವ ಆಸೆ ನುಚ್ಚು ನೂರಾಗಿದೆ. ಪ್ರಸಕ್ತ ಲೀಗ್‌ನಲ್ಲಿ ಪಂಜಾಬ್ ತನ್ನ ಸ್ಥಿರ ಪ್ರದರ್ಶನ ಮುಂದುವರೆಸಿದೆ.
ಮಂಗಳವಾರ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 219 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಸೇರಿಸಿ ಸೋಲು ಕಂಡಿತು. ಪ್ರಸಕ್ತ ಲೀಗ್‌ನಲ್ಲಿ ಚೆನ್ನೈ ನಾಲ್ಕನೇ ಸೋಲು ಕಂಡಿದೆ.

ಭರ್ಜರಿ ಆರಂಭ
ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭ ಅಮೋಘವಾಗಿತ್ತು. ಚೆನ್ನೈ ಪರ ರಚಿನ್ ರವೀಂದ್ರ ಹಾಗೂ ಡೆವೊನ್ ಕಾನ್ವೇ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮೊದಲ ವಿಕೆಟ್‌ಗೆ 6.3 ಓವರ್‌ಗಳಲ್ಲಿ 61 ರನ್ ಸಿಡಿಸಿತು. ಈ ವೇಳೆ ಗ್ಲೇನ್ ಮ್ಯಾಕ್ಸ್‌ವೆಲ್ ಅವರ ಎಸೆತದಲ್ಲಿ ಬಿಗ್ ಹಿಟ್ ಬಾರಿಸಲು ಕ್ರೀಸ್ ಬಿಟ್ಟು ಮುಂದೆ ಸಾಗಿದ ರಚಿನ್ ರವೀಂದ್ರ ಅವರನ್ನು ವಿಕೆಟ್ ಕೀಪರ್ ಪ್ರಭಸಿಮ್ರನ್ ಸಿಂಗ್ ಸ್ಟಂಪ್ ಔಟ್ ಮಾಡಿದರು. ಈ ವೇಳೆ ರಚಿನ್ ರವೀಂದ್ರ 6 ಬೌಂಡರಿ ನೆರವಿನಿಂದ 36 ರನ್ ಸಿಡಿಸಿದರು.
ನಾಯಕ ರುತುರಾಜ್ ಗಾಯಕ್ವಾಡ್ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಇವರು 1 ರನ್ ಬಾರಿಸಿದ್ದಾಗ ಲಾಕಿ ಫರ್ಗ್ಯುಸನ್ ಎಸೆತವನ್ನು ಮಿಡ್ ವಿಕೆಟ್ ಮೇಲೆ ಬಿಗ್ ಹಿಟ್ ಬಾರಿಸಲು ಹೋಗಿ ಶಶಾಂಕ್ ಸಿಂಗ್ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು.
ಉತ್ತಮ ಜೊತೆಯಾಟ
62 ರನ್‌ಗಳಿಗೆ ಎರಡು ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಡೆವೊನ್ ಕಾನ್ವೇ ಹಾಗೂ ಶಿವಂ ದುಬೆ ಜೋಡಿ ತಾಳ್ಮೆಯಿಂದ ಇನಿಂಗ್ಸ್‌ಕಟ್ಟುವ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಈ ವೇಳೆ ಈ ಜೋಡಿ ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡು ಬ್ಯಾಡ್ ಮಾಡಿತು. ಕಾನ್ವೆ ಹಾಗೂ ದುಬೆ ಜೋಡಿ 51 ಎಸೆತಗಳಲ್ಲಿ 89 ರನ್ ಸೇರಿಸಿ ತಂಡಕ್ಕೆ ಆಧಾರವಾಯಿತು. ಶಿವಂ ದುಬೆ 27 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 42 ರನ್ ಸಿಡಿಸಿ ಔಟ್ ಆದರು.
ಡೆವೊನ್ ಕಾನ್ವೇ ರಿಟೈರ್ಡ್ ಔಟ್
ಡೆವೊನ್ ಕಾನ್ವೇ 49 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 69 ರನ್ ಬಾರಿಸಿದ್ದಾಗ ರಿಟೈರ್ಡ್ ಔಟ್ ಆದರು.
ಕಳಪೆ ಆರಂಭ
ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಪ್ರಭಸಿಮ್ರನ್ ಸಿಂಗ್ ಸೊನ್ನೆ ಸುತ್ತಿದರು. ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಶ್ರೇಯಸ್ ಅಯ್ಯರ್ 1 ಸಿಕ್ಸರ್ ಬಾರಿಸಿ ಸಿಎಸ್‌ಕೆ ತಂಡದ ಬೌಲರ್‌ಗಳನ್ನು ಕಾಡುವ ಸೂಚನೆ ನೀಡಿದರು. ಆದರೆ ಖಲೀಲ್ ಅಹ್ಮದ್ ಅವರ ಎಸೆದ ಎಸೆತವನ್ನು ತಪ್ಪಾಗಿ ಅರ್ಥಹಿಸಿ ಬೋಲ್ಡ್ ಆದರು. ಆಲ್‌ರೌಂಡರ್ ಮಾರ್ಕಸ್ ಸ್ಟೋಯಿಸ್ ಸಹ 4, ಭರವಸೆಯ ಆಟಗಾರ ನೇಹಲ್ ವಧೇರಾ 9, ಸ್ಟಾರ್ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್ 1 ರನ್ ಸಿಡಿಸಿ ಔಟ್ ಆದರು.
ಒಂದು ಬದಿಯಲ್ಲಿ ಸ್ಟಾರ್ ಆಟಗಾರರು ತಮ್ಮ ಜವಾಬ್ದಾರಿಯನ್ನು ಮರೆತು ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರೆ, ಇನ್ನೊಂದು ಬದಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಪ್ರಿಯಾಂಶ್ ಆರ್ಯ ಆರ್ಭಟಿಸಿದರು. ಇವರಿಗೆ ಯಾವೊಬ್ಬ ಸ್ಟಾರ್ ಆಟಗಾರ ಉತ್ತಮ ಸಾಥ್ ನೀಡಲೇ ಇಲ್ಲ. ಪಂಜಾಬ್ ತಂಡ 8 ಓವರ್ ಆಗುವಷ್ಟರಲ್ಲಿ 83 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡಕ್ಕೆ ನೆರವಾದವರೇ ಪ್ರಿಯಾಂಶ್ ಆರ್ಯ ಹಾಗೂ ಶಶಾಂಕ್ ಸಿಂಗ್.
ಪ್ರಿಯಾಂಶ್, ಶಶಾಂಕ್ ಜುಗಲ್‌ಬಂಧಿ
ಪಂಜಾಬ್ ಕಿಂಗ್ಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿ, ಸುಲಭ ಗೆಲುವು ದಾಖಲಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಚೆನ್ನೈಗೆ ಪ್ರಿಯಾಂಶ್ ಹಾಗೂ ಶಶಾಂಕ್ ಜೋಡಿ ಶಾಕ್ ನೀಡಿತು. ಈ ಜೊಡಿಯ ಆಟಕ್ಕೆ ಬ್ರೇಕ್ ಹಾಕಲು ಚೆನ್ನೈ ಬೌಲರ್‌ಗಳು ನಿಜಕ್ಕೂ ಹೈರಾಣಾದ್ರು. ಈ ಜೋಡಿ ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಅಲ್ಲದೆ ಬಿಗ್ ಹಿಟ್‌ಗಳನ್ನು ಬಾರಿಸುತ್ತಲೇ ರನ್ ವೇಗವನ್ನು ಸ್ಥಿರವಾಗಿ ಇಟ್ಟುಕೊಂಡಿತ್ತು. ಈ ಜೋಡಿ 34 ಎಸೆತಗಳಲ್ಲಿ 71 ರನ್ ಸಿಡಿಸಿ ಆರ್ಭಟಿಸಿತು.
24 ವರ್ಷದ ಪ್ರಿಯಾಂಶ್ ಆರ್ಯ ತಮ್ಮ ಕಲಾತ್ಮಕ ಆಟದ ಪ್ರದರ್ಶನ ನೀಡಿದರು. ಚೆನ್ನೈ ತಂಡದ ಎಲ್ಲ ಬೌಲರ್‌ಗಳ ವಿರುದ್ಧ ರನ್ ಮಳೆ ಸುರಿಸಿದ ಇವರು ಆರ್ಭಟಿಸಿದರು. ಇವರು 42 ಎಸೆತಗಳಲ್ಲಿ 7 ಬೌಂಡರಿ, 9 ಸಿಕ್ಸರ್ ನೆರವಿನಿಂದ 103 ರನ್ ಸಿಡಿಸಿ ತಂಡಕ್ಕೆ ನೆರವಾದರು. ಇವರ ಅಮೊಘ ಆಟದ ಬಲದಿಂದಲೇ ಪಂಜಾಬ್ ದೊಡ್ಡ ಮೊತ್ತ ಕಲೆ ಹಾಕುವತ್ತ ದಿಟ್ಟ ಹೆಜ್ಜೆ ಇಟ್ಟಿತು.
7ನೇ ವಿಕೆಟ್ 65 ಜೊತೆಯಾಟ
ಪ್ರಿಯಾಂಶ್ ಆರ್ಯ ಔಟ್ ಆದ ಬಳಿಕ ರನ್ ವೇಗಕ್ಕೆ ಕಡಿವಾಣ ಹಾಕಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಚೆನ್ನೈ ತಂಡಕ್ಕೆ ಶಶಾಂಕ್ ಸಿಂಗ್ ಹಾಗೂ ಮಾರ್ಕೊ ಜಾನ್ಸನ್ ಪೆಟ್ಟು ನೀಡಿದರು. ಈ ಜೋಡಿ ಡೆತ್ ಓವರ್‌ಗಳ ಸಂಪೂರ್ಣ ಲಾಭ ಪಡೆದು ಬ್ಯಾಟಿಂಗ್ ಮಾಡಿತು. ಪರಿಣಾಮ 38 ಎಸೆತಗಳಲ್ಲಿ ಅಜೇಯ 65 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಶಶಾಂಕ್ ಸಿಂಗ್ ತಮ್ಮನ್ನು ಉಳಿಸಿಕೊಂಡ ತಂಡದ ನಿರ್ಧಾರ ಸರಿಯಾಗಿದೆ ಎಂಬುದನ್ನು ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದ ಸಾಬೀತು ಪಡಿಸಿದರು. ಇವರು 36 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 52 ರನ್ ಸಿಡಿಸಿದರು. ಮಾರ್ಕೊ ಜಾನ್ಸನ್ ಸಹ 19 ಎಸೆತಗಳಲ್ಲಿ ಅಜೇಯ 34 ರನ್ ಸಿಡಿಸಿ ಮೊತ್ತ ಹಿಗ್ಗಿಸುವಲ್ಲಿ ಸಫಲರಾದರು.
ಚೆನ್ನೈ ತಂಡದ ಪರ ಖಲೀಲ್ ಅಹ್ಮದ್, ರವೀಚಂದ್ರನ್ ಅಶ್ವಿನ್ ತಲಾ ಎರಡು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications