ಪಂಜಾಬ್ ಕಿಂಗ್ಸ್ ಅಬ್ಬರದ ಪ್ರದರ್ಶನ ನೀಡಿ ತವರಿನಲ್ಲಿ ಗೆಲುವಿನ ಖಾತೆಯನ್ನು ಓಪನ್ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಆಸೆ ಕಮರಿದೆ. ಸಿಎಸ್‌ಕೆ ತಂಡದ ಎರಡನೇ ಗೆಲುವಿನ ಕನಸು ಮುಂದಿನ ಪಂದ್ಯಕ್ಕೆ ಶಿಫ್ಟ್ ಆಗಿದೆ. ಪಂಜಾಬ್ ಪರ ಈ ಗೆಲುವಿನಲ್ಲಿ ಮಿಂಚಿದ್ದು ಯಂಗ್ ಬ್ಯಾಟರ್ ಪ್ರಿಯಾಂಶ್ ಆರ್ಯ. ಆದರೆ ಚೆನ್ನೈ ಪಂದ್ಯವನ್ನು ಸೋಲಲು ಕಾರಣವೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್‌ಗಳ ಸವಾಲಿನ ಗುರಿಯನ್ನು ಕಲೆ ಹಾಕಿತು. ಪಂಜಾಬ್ ಈ ಸವಾಲಿನ ಮೊತ್ತವನ್ನ ಕಲೆ ಹಾಕುವಲ್ಲಿ ಯುವ ಬ್ಯಾಟರ್ ಪ್ರಿಯಾಂಶ್ ಆರ್ಯ ಕೊಡುಗೆ ಅಪಾರ. ಇವರು 42 ಎಸೆತಗಳಲ್ಲಿ 103 ಸಿಡಿಸಿ ಅಬ್ಬರಿಸಿದರು. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ವೇಗದ ಶತಕ ಬಾರಿಸಿದ ಅನ್ ಕ್ಯಾಪ್ಡ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು 39 ಎಸೆತಗಳಲ್ಲಿ ಶತಕ ಬಾರಿಸಿದರು.

ಪ್ರಿಯಾಂಶ್ ಆರ್ಯ 39 ಎಸೆಗಳಲ್ಲಿ ಬಾರಿಸಿದ ಶತಕ ಇವರನ್ನು ವೇಗದ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ನಾಲ್ಕನೇ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಇವರ ಅಮೋಘ ಬ್ಯಾಟಿಂಗ್‌ನಲ್ಲಿ ಏಳು ಬೌಂಡರಿ, 9 ಸಿಕ್ಸರ್‌ಗಳು ಹರಿದು ಬಂದಿವೆ. ಇವರ ಈ ಬಿಗ್ ಇನಿಂಗ್ಸ್ ಪಂಜಾಬ್ 83 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮೂಡಿ ಬಂದಿದೆ. ಪಂಜಾಬ್ ದೊಡ್ಡ ಮೊತ್ತ ಪೇರಿಸುವಲ್ಲಿ ಶಶಾಂಕ್ ಸಿಂಗ್ ಕೊಡುಗೆ ಸಹ ಅಪಾರ. ಇವರು 36 ಎಸೆತಗಳಲ್ಲಿ ಅಜೇಯ 52 ರನ್ ಸಿಡಿಸಿ ಮಿಂಚಿದರು.
ಗುರಿಯನ್ನು ಹಿಂಬಾಲಿಸಿದ ಸಿಎಸ್‌ಕೆ ಪರ ಆರಂಭಿಕ ಆಟಗಾರ ಡೇವೊನ್ ಕಾನ್ವೇ ಬಾರಿಸಿದ 69 ರನ್ ತಂಡಕ್ಕೆ ನೆರವಾಯಿತು. ಇನ್ನು ಮಹೇಂದ್ರ ಸಿಂಗ್ ಧೋನಿ 12 ಎಸೆತಗಳಲ್ಲಿ 27 ರನ್ ಬಾರಿಸಿದರೂ ಸಹ ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ವಿಫಲರಾದರು. ಸಿಎಸ್‌ಕೆ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 201 ರನ್ ಕಲೆ ಹಾಕಿತು. ಈ ಮೂಲಕ ಸಿಎಸ್‌ಕೆ ಸತತ ನಾಲ್ಕನೇ ಸೋಲು ಕಂಡಿದೆ.
ಪಂಜಾಬ್ ಕಿಂಗ್ಸ್‌ನ ಪ್ರಿಯಾಂಶ್ ಆರ್ಯ ಅಬ್ಬರದ ಶತಕ ಬಲದಿಂದ ಪಂಜಾಬ್ ಕಲೆ ಹಾಕಿದ್ದ ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಸಿಎಸ್‌ಕೆ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತು. ಅಗತ್ಯ ರನ್‌ಗಳನ್ನು ಕಲೆ ಹಾಕುತ್ತಲೇ ಚೆನ್ನೈ ಸಾಗಿತ್ತು. ಒಂದು ಹಂತದಲ್ಲಿ ಚೆನ್ನೈ 14 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 139 ರನ್ ಕಲೆ ಹಾಕಿತ್ತು. ಈ ವೇಳೆ ಗೆಲುವಿಗೆ 6 ಓವರ್‌ಗಳಲ್ಲಿ 81 ರನ್ ಅವಶ್ಯಕತೆ ಇತ್ತು.

ಆದರೆ ಸಿಎಸ್‌ಕೆ ಬ್ಯಾಟರ್‌ಗಳು ಮುಂದಿನ ಮೂರು ಓವರ್‌ಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲವಾಯಿತು. ಸಿಎಸ್‌ಕೆ 15 ರಿಂದ 17 ಓವರ್‌ಗಳಲ್ಲಿ 22 ರನ್ ಸೇರಿಸಿತು. ಶಿವಂ ದುಬೇ ಔಟ್ ಆಗುತ್ತಿದ್ದಂತೆ ರನ್ ರೇಟ್ ಸಹ ಏರುತ್ತಾ ಸಾಗಿತು. ಅರ್ಷದೀಪ್ 15ನೇ ಓವರ್‌ನಲ್ಲಿ 6 ರನ್ ನೀಡಿದರೆ, ಲಾಕಿ ಫಾಗ್ಯೂಸನ್ ಸಹ 16ನೇ ಓವರ್ ಸೂಪರ್ ಆಗಿ ಬೌಲ್ ಮಾಡಿ 7 ರನ್ ನೀಡಿ, ದುಬೆ ವಿಕೆಟ್ ಪಡೆದರು. ಯುಜುವೇಂದ್ರ ಚಹಾಲ್ ಸಹ ಬಿಗುವಿನ ದಾಳಿ ನಡೆಸಿ 9 ರನ್ ನೀಡಿದರು. ಪ್ರತಿ ಓವರ್‌ಗೆ 14 ರನ್ ಬಾರಿಸಿಬೇಕಿದ್ದಲ್ಲಿ ಚೆನ್ನೈ ಪ್ರತಿ ಓವರ್‌ಗೆ 7 ರನ್ ಕಲೆ ಹಾಕಿದ್ದು ಗೆಲುವು ಪಂಜಾಬ್‌ನತ್ತ ವಾಲುವಂತೆ ಮಾಡಿತು.