ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಪ್ರತಿದಿನ ಯಾವುದಾದರೊಂದು ನಾಟಕ ಕಂಡುಬರುತ್ತಿದೆ. ಇದೀಗ ಪಾಕಿಸ್ತಾನ ತಂಡದ ಕೋಚ್ ಜೇಸನ್ ಗಿಲ್ಲೆಸ್ಪಿ ಅವರನ್ನು ಟೆಸ್ಟ್ ಮಾದರಿಯಲ್ಲಿ ತೆಗೆದುಹಾಕಲಾಗುತ್ತದೆ ಎಂಬ ಸುದ್ದಿ ಹೊರ ಬಂದಿದೆ. ಆದರೆ, ಈ ಸುದ್ದಿಯನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ತಳ್ಳಿ ಹಾಕಿದೆ. ಪಾಕಿಸ್ತಾನ ತಂಡದ ಹೆಡ್ ಕೋಚ್ ಅನ್ನು ತಕ್ಷಣವೇ ತೆಗೆದುಹಾಕುತ್ತಿರುವುದು ಇದೇ ಮೊದಲಲ್ಲ. 2019 ರಿಂದ ಇಲ್ಲಿಯವರೆಗೆ ಪಾಕಿಸ್ತಾನ ತಂಡದ 10 ಹೆಡ್ ಕೋಚ್‌ಗಳನ್ನು ನೋಡಿದೆ. ಇವರಲ್ಲಿ 2 ಮಂದಿ ಹಂಗಾಮಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪಾಕಿಸ್ತಾನ ಟೆಸ್ಟ್ ತಂಡದ ಹೆಡ್ ಕೋಚ್ ಜೇಸನ್ ಗಿಲ್ಲೆಸ್ಪಿ ಅವರ ಕೆಳಗಿಳಿಸುವ ವದಂತಿಗಳನ್ನು ತಳ್ಳಿಹಾಕಿರುವ ಪಿಸಿಬಿ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಗೆ ಅವರು ಕೋಚ್ ಆಗಿ ಮುಂದುವರಿಯುವುದಾಗಿ ಹೇಳಿದೆ. ಭಾನುವಾರ ಗಿಲ್ಲೆಸ್ಪಿ ಅವರನ್ನು ವಜಾಗೊಳಿಸಿ ಮಾಜಿ ವೇಗದ ಬೌಲರ್ ಮತ್ತು ಪಿಸಿಬಿ ಆಯ್ಕೆ ಸಮಿತಿಯ ಸದಸ್ಯ ಆಕಿಬ್ ಜಾವೇದ್ ಪಾಕಿಸ್ತಾನ ತಂಡಕ್ಕೆ ಎಲ್ಲಾ ಮೂರು ಸ್ವರೂಪಗಳಲ್ಲಿ ಮುಖ್ಯ ಕೋಚ್ ಆಗಲಿದ್ದಾರೆ ಎಂದು ವರದಿಯಾಗಿತ್ತು.

ಪಿಸಿಬಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಜೇಸನ್ ಗಿಲ್ಲೆಸ್ಪಿ ಅವರನ್ನು ವಜಾಗೊಳಿಸುವ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯ ಸರಣಿವರೆಗೆ ಪಾಕಿಸ್ತಾನ ತಂಡದ ಕೋಚ್ ಆಗಿ ಜೇಸನ್ ಗಿಲ್ಲೆಸ್ಪಿ ಮುಂದುವರಿಯಲಿದ್ದಾರೆ. ಆಕಿಬ್ ಜಾವೇದ್ ಅವರನ್ನು ಆಯ್ಕೆ ಸಮಿತಿಯಲ್ಲಿ ಸೇರಿಸಲಾಗಿದೆ. ಈ ಸಮಿತಿಯ ಮುಖ್ಯಸ್ಥರು ಇಲ್ಲ. ಆದರೆ ಜಾವೇದ್ ನೇತೃತ್ವ ವಹಿಸಿ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ ಎಂದು ಹೇಳಿದೆ.
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡದ ಪೂರ್ಣ ಸಮಯದ ಹೆಡ್ ಕೋಚ್ ಆಗಲು ಪಿಸಿಬಿಯ ಪ್ರಸ್ತಾಪವನ್ನು ಗಿಲ್ಲೆಸ್ಪಿ ತಿರಸ್ಕರಿಸಿದ್ದಾರೆ ಎಂದು ವರದಿಗಳು ಹೇಳಿವೆ. ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಗ್ಯಾರಿ ಕರ್ಸ್ಟನ್ ಕೆಳಗಿಳಿದ ನಂತರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಹಂಗಾಮಿ ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ವರ್ಷ ಏಪ್ರಿಲ್‌ನಲ್ಲಿ ಗಿಲ್ಲೆಸ್ಪಿ ಎರಡು ವರ್ಷಗಳ ಒಪ್ಪಂದದ ಮೇರೆಗೆ ಟೆಸ್ಟ್‌ಗಳಲ್ಲಿ ಪಾಕಿಸ್ತಾನದ ಹೆಡ್ ಕೋಚ್ ಆಗಿದ್ದಾರೆ. ಆದರೆ, ಗಿಲ್ಲೆಸಿ ಅವರ ಕೋಚಿಂಗ್‌ನಲ್ಲಿ ಪಾಕಿಸ್ತಾನ ತಂಡವು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಸೋತಿತ್ತು. ಇದಾದ ನಂತರ ಅದ್ಭುತ ಪುನರಾಗಮನ ಮಾಡಿದ ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಅನ್ನು 2-1 ರಿಂದ ಸೋಲಿಸಿತು.
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ 2019 ರಿಂದ 2024ರ ವರೆಗೆ ಒಟ್ಟು ಹತ್ತು ಬಾರಿ ಹೆಡ್‌ಕೋಚ್‌ಗಳನ್ನು ಬದಲಾವಣೆ ಮಾಡಿದೆ. ಯಾರಿಂದಲ್ಲೂ ಪಾಕಿಸ್ತಾನ ತಂಡದ ಹಣೆಬರಹ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ.
ಮಿಸ್ಬಾ ಉಲ್ ಹಕ್- 2019-21
ಸಿಕಂದರ್ ಬಸ್ತಿ- 2021-22
ಸಯೀದ್ ಅಜ್ಮಲ್- 2022
ಸಾಕಿಬ್ ಮಸೂದ್- 2022-23
ಅಬ್ದುಲ್ ರೆಹಮಾನ್ (ಹಂಗಾಮಿ ಕೋಚ್)- 2023
ಗ್ರಾಂಟ್ ಬ್ರಾಡ್‌ಬರ್ನ್- 2023
ಮಹ್ಮದ್- 2024
ಗ್ಯಾರಿ ಕರ್ಸ್ಟನ್ (ವೈಟ್ ಬಾಲ್)- 2024
ಜೇಸನ್ ಗಿಲ್ಲೆಸ್ಪಿ (ರೆಡ್ ಬಾಲ್)- 2024
ಜೇಸನ್ ಗಿಲ್ಲೆಸ್ಪಿ (ಹಂಗಾಮಿ ಕೋಚ್)- 2024
ಇತ್ತೀಚೆಗಷ್ಟೇ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ 2-1 ಅಂತರದಿಂದ ಗೆದ್ದಿತ್ತು. ಆದರೆ, ನಂತರ ಆರಂಭವಾದರ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು ಆಸ್ಟ್ರೇಲಿಯಾ ಸೋಲಿಸಿತ್ತು. ಈಗ ಹೋಬರ್ಟ್‌ನಲ್ಲಿ ಪಾಕಿಸ್ತಾನ ಕೊನೆಯ ಟಿ20 ಪಂದ್ಯವನ್ನು ಆಡಲಿದೆ. ಇದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಡಿಸೆಂಬರ್ 26 ರಂದು ಆರಂಭವಾಗಲಿದೆ.