ವಿಶ್ವಕಪ್‌ಗೆ ಕೊನೆಯ ಹಂತದ ಸಿದ್ಧತೆ ನಡೆಸುತ್ತಿರುವ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಸರಣಿಯ ಮೂಲಕ ತಂಡದ ಸಂಯೋಜನೆಯನ್ನು ಅಂತಿಮಗೊಳಿಸುವ ಪ್ರಯತ್ನ ನಡೆಸುತ್ತಿದೆ. ಇಂಥಾ ಸಂದರ್ಭದಲ್ಲಿ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯುವತ್ತಿರುವ ಬಹುತೇಕ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದು ತಂಡಕ್ಕೆ ಸಕಾರಾತ್ಮಕ ತಲೆನೋವಿಗೆ ಕಾರಣವಾಗುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊಹಮ್ಮದ್ ಶಮಿ ಅವರ 5 ವಿಕೆಟ್‌ಗಳ ಗೊಂಚಲು ಇದಕ್ಕೆ ಮತ್ತೊಂದು ಉದಾಹರಣೆ.
ಮೊಹಮ್ಮದ್ ಶಮಿಯಂಥಾ ಅನುಭವಿ ಆಟಗಾರ ತಂಡಕ್ಕೆ ಯಾವತ್ತಿಗೂ ವಿಶೆಷ ಬಲ ನೀಡುವ ಸಾಮರ್ಥ್ಯ ಹೊಂದಿರುವ ಆಟಗಾರ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಮೂವರು ವೇಗಿಗಳ ಪೈಕಿ ಓರ್ವ ವೇಗಿಯನ್ನು ಬ್ಯಾಟಿಂಗ್‌ನಿಂದಲೂ ಕೊಡುಗೆ ನೀಡಬಲ್ಲ ಸಾಮರ್ಥ್ಯದ ಆಧಾರದಲ್ಲಿ ಪರಿಗಣಿಸುವುದರಿಂದಾಗಿ ಶಮಿ ಬದಲಿಗೆ ಶಾರ್ದೂಲ್ ಠಾಕೂರ್ ಆಡುವ 11ರ ಬಳಗದಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದಾರೆ.

ಆದರೆ ಈ ಆಲೋಚನೆ ಸೂಕ್ತವಲ್ಲ ಎಂದಿದ್ದಾರೆ ಭಾರತದ ಮಾಜಿ ಕ್ರಿಕೆಟಿಗ ಪಿಯೂಷ್ ಚಾವ್ಲಾ. ಶಾರ್ದೂಲ್ ಠಾಕುರ್ ಬದಲಿಗೆ ಪರಿಪೂರ್ಣ ವೇಗಿಯಾದ ಮೊಹಮ್ಮದ್ ಶಮಿ ಅವರಿಗೆ ಮೂರನೇ ವೇಗಿಯಾಗಿ ತಂಡದಲ್ಲಿ ಸ್ಥಾನವನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಈ ಇಬ್ಬರು ವೇಗದ ಬೌಲರ್‌ಗಳು ನೀಡಿದ ವ್ಯತಿರಿಕ್ತ ಬೌಲಿಂಗ್ ಪ್ರದರ್ಶನವೂ ಈ ಹೇಳಿಕೆಗೆ ಪೂರಕವಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ ಹಾಗೂ ಶಾರ್ದೂಲ್ ಠಾಕೂರ್ ಇಬ್ಬರು ಕೂಡ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಈ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ 10 ಓವರ್‌ಗಳಲ್ಲಿ 78 ರನ್‌ಗಳನ್ನು ನಿಡಿ ಯಾವುದೇ ವಿಕೆಟ್ ಪಡೆಯದ ಮೂಲಕ ಅತ್ಯಂತ ದುಬಾರಿ ಎನಿಸಿದ್ದರು. ಆದರೆ ಮೊಹಮ್ಮದ್ ಶಮಿ 10 ಓವರ್‌ಗಳ ಬೌಲಿಂಗ್‌ನಲ್ಲಿ 51 ರನ್‌ಗಳನ್ನು ನೀಡಿ 5 ವಿಕೆಟ್‌ಗಳ ಗೊಂಚಲು ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಶಾರ್ದೂಲ್ ಠಾಕೂರ್ ವಿಚಾರವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಪಿಯೂಷ್ ಚಾವ್ಲಾ ಅವರ ಎಕಾನಮಿ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಶಾರ್ದೂಲ್ ಅವರ ಎಕಾನಮಿ ಯಾವಾಗಲೂ ಹೆಚ್ಚಾಗಿದ್ದು ವಿಶ್ವಕಪ್‌ನಲ್ಲಿ ಭಾರತದ ಪಿಚ್‌ಗಳು ಫ್ಲ್ಯಾಟ್ ಆಗಿರುವ ಸಾಧ್ಯತೆಯಿದೆ. ಇಂಥಾ ಪಿಚ್‌ನಲ್ಲಿ ಶಾರ್ದೂಕ್ ಠಾಕೂರ್ ಬದಲಿಗೆ ಮೊಹಮ್ಮದ್ ಶಮಿ ಅವರನ್ನು ಬಳಸಿಕೊಳ್ಳುವುದು ಉತ್ತಮ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ಶಾರ್ದೂಲ್ ಠಾಕೂರ್ ಅವರ ಬ್ಯಾಟಿಂಗನ್ನು ಕೂಡ ಗಮನಿಸಿದರೆ ಆತ 20 ಎಸೆತಗಳಲ್ಲಿ 30-40 ರನ್‌ಗಳನ್ನುಬಾರಿಸುವಂತಾ ಆಟಗಾರ ಅಲ್ಲ. ಆತ ಎಸೆತಕ್ಕೊಂದರಂತೆ ರನ್‌ಗಳಿಸುವಾಗ ಉತ್ತಮವಾದ ಬ್ಯಾಟರ್ ಆಗಬಲ್ಲರು. 24 ಎಸೆತಗಳಲ್ಲಿ 25 ರನ್‌ಗಳನ್ನು ಗಳಿಸುವಂಥಾ ಸಾಮರ್ಥ್ಯ ಅವರಲ್ಲಿದೆ. ಇನ್ನು ಅವರ ಬೌಲಿಂಗ್ ವಿಚಾರಕ್ಕೆ ಬಂದರೆ ಆತ ಕೆಲ ವಿಕೆಟ್‌ಗಳನ್ನು ಪಡೆಯುವಂತಾ ಬೌಲರ್ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಅವರ ಎಕಾನಮಿ ದರ ಯಾವಾಗಲೂ ಹೆಚ್ಚಿನದಾಗಿದೆ"
"ಇನ್ನು ವಿಶ್ವಕಪ್‌ನಲ್ಲಿ ಭಾರತ ಆಡುವ ಕಂಡೀಶನ್‌ಗಳನ್ನು ನೋಡಿದರೆ ಬಹುತೇಕ ಪಿಚ್‌ಗಳು ಫ್ಲ್ಯಾಟ್ ಆಗಿದೆ. ಹಾಗಾಗಿ ಅಂಥಾ ಸಂದರ್ಭದಲ್ಲಿ ಪರಿಪೂರ್ಣಪ್ರಮಾಣದ ಬೌಲರ್‌ಗಳ ಅಗತ್ಯವಿದ್ದು ಆತ 135-140 ಕಿ.ಮೀ ವೇಗದಲ್ಲಿ ಬೌಲಿಂಗ್ ನಡೆಸುವ ಸಾಮರ್ಥ್ಯಹೊಂದಿರಬೇಕಾಗುತ್ತದೆ" ಎಂದು ಪಿಯೂಷ್ ಚಾವ್ಲ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.