
ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಪಿಂಕ್ ಪ್ಯಾಂಥರ್ಸ್ ವಿರುದ್ಧ ಯು ಮುಂಬಾ ಅಬ್ಬರಿಸಿದ್ರೆ, ಹರಿಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಭರ್ಜರಿ ಗೆಲುವು ಸಾಧಿಸಿದೆ.
ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ 22 ರೈಡಿಂಗ್ ಪಾಯಿಂಟ್ಸ್ ಮೂಲಕ ಅಬ್ಬರದ ಆಟವಾಡಿದ್ರೆ, ಪಿಂಕ್ ಪ್ಯಾಂಥರ್ಸ್ 19 ಪಾಯಿಂಟ್ಸ್‌ಗಳನ್ನ ರೈಡಿಂಗ್ ಮೂಲಕ ಕಲೆಹಾಕಿದೆ. ಯು ಮುಂಬಾ 9 ಟ್ಯಾಕಲ್ ಪಾಯಿಂಟ್ಸ್ ಕಲೆಹಾಕಿದ್ರೆ, ಪಿಂಕ್ ಪ್ಯಾಂಥರ್ಸ್ 8 ಪಾಯಿಂಟ್ಸ್ ತಲುಪಿದೆ.
ಯು ಮುಂಬಾ ಪರ ವಿ. ಅಜಿತ್ ಕುಮಾರ್ ಒಟ್ಟು 11 ಪಾಯಿಂಟ್ಸ್‌ನೊಂದಿಗೆ ಯಶಸ್ವಿ ರೈಡರ್ ಎನಿಸಿಕೊಂಡ್ರೆ, ಅಭಿಷೇಕ್ ಸಿಂಗ್ 10 ಪಾಯಿಂಟ್ಸ್‌ನೊಂದಿಗೆ ಉತ್ತಮ ಸಾಥ್ ನೀಡಿದ್ರು. ಅಫ್ಘಾನಿಸ್ತಾನದ ಫಜೇಲ್ ಅತ್ರಾಚಲಿ 3 ಟ್ಯಾಕಲ್ ಪಾಯಿಂಟ್ಸ್ ಗಿಟ್ಟಿಸಿದ್ರು.
ಇನ್ನು ಪಿಂಕ್ ಪ್ಯಾಂಥರ್ಸ್ ಪರ ಅರ್ಜುನ್ ದೇಶ್ವಾಲ್ 9 ರೈಡಿಂಗ್ ಪಾಯಿಂಟ್ಸ್, ವಿಶಾಲ್ 3 ಟ್ಯಾಕಲ್ ಪಾಯಿಂಟ್ಸ್, ಶೌಲ್ ಕುಮಾರ್ 2 ಟ್ಯಾಕಲ್ ಪಾಯಿಂಟ್ಸ್‌ನೊಂದಿಗೆ ಮಿಂಚಿದ್ದಾರೆ. ಆದ್ರೂ ರೈಡಿಂಗ್ ಪಾಯಿಂಟ್ಸ್‌ನಲ್ಲಿ ಎಡವಿದ ಪಿಂಕ್ ಪ್ಯಾಂಥರ್ಸ್ 28-37 ಪಾಯಿಂಟ್ಸ್‌ನೊಂದಿಗೆ ಯು ಮುಂಬಾಗೆ ಶರಣಾಗಿದೆ.
ಎರಡನೇ ಪಂದ್ಯದಲ್ಲಿ ನಮ್ಮ ಬೆಂಗಳೂರು ಬುಲ್ಸ್‌ಗೆ ಸವಾಲಾಗಿದ್ದು ಹರಿಯಾಣ ಸ್ಟೀಲರ್ಸ್. ಬೆಂಗಳೂರು ಪರ ಯಶಸ್ವಿ ರೈಡರ್ ಆಗಿ ಮಿಂಚಿದ ಪವನ್ ಕುಮಾರ್ ಬರೋಬ್ಬರಿ 15 ರೈಡಿಂಗ್ ಪಾಯಿಂಟ್ಸ್ ಎರಡು ಟ್ಯಾಕಲ್ ಮತ್ತು ಎರಡು ಬೋನಸ್ ಪಾಯಿಂಟ್ಸ್‌ನೊಂದಿಗೆ ಒಟ್ಟಾರೆ 22 ಪಾಯಿಂಟ್ಸ್ ತಮ್ಮದಾಗಿಸಿಕೊಂಡಿದ್ದಾರೆ.
ಮೋರ್ ಜಿ.ಬಿ 5 ಪಾಯಿಂಟ್ಸ್, ಮಹೀಂದರ್ ಸಿಂಗ್ 4 ಪಾಯಿಂಟ್ಸ್ ಗಳಿಸುವ ಮೂಲಕ ಪವನ್ ಕುಮಾರ್‌ಗೆ ಸಾಥ್ ನೀಡಿದರು. ಆದ್ರೆ ಹರಿಯಾಣ ಸ್ಟೀಲರ್ಸ್ ಕ್ಷೇತ್ರ ರಕ್ಷಣೆಯಲ್ಲಿ ಎಡವಿದ್ದು, ಟ್ಯಾಕಲ್ ಪಾಯಿಂಟ್ಸ್ ಕಲೆಹಾಕುವಲ್ಲಿ ಹಿಂದೆ ಬಿದ್ದಿತು. ವಿಕಾಸ್ ಖಂಡೋಲಾ 6 ಪಾಯಿಂಟ್ಸ್, ರೋಹಿತ್ ಗುಲಿಯಾ 4 ಪಾಯಿಂಟ್ಸ್, ಆಶಿಶ್ 1, ಮೀತು ಮಹೇಂದರ್ 1 ಪಾಯಿಂಟ್ಸ್ ಗಳಿಸಿ ತಂಡದ ಪಾಯಿಂಟ್ಸ್ ಹೆಚ್ಚಿದರೇ ಹೊರತು ತಂಡವನ್ನ ಗೆಲುವಿನ ದಡ ತಲುಪಿಸುವಲ್ಲಿ ಎಡವಿದ್ರು.
ಅಂತಿಮವಾಗಿ ಬೆಂಗಳೂರು ಬುಲ್ಸ್ 42-28 ಪಾಯಿಂಟ್ಸ್‌ಗಳ ಅಂತರದಲ್ಲಿ ಪಂದ್ಯವನ್ನ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದು, ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವಿನೊಂದಿಗೆ ಒಟ್ಟು 15 ಪಾಯಿಂಟ್ಸ್ ಕಲೆಹಾಕಿದೆ.