ಗುಜರಾತ್ ಟೈಟನ್ಸ್ ಈ ವರ್ಷ ಭರ್ಜರಿ ಪ್ರದರ್ಶನ ನೀಡುತ್ತಿದೆ. 12 ಅಂಕಗಳನ್ನು ಗಳಿಸಿರುವ ಟೈಟನ್ಸ್ ಪ್ಲೇ ಆಫ್ ಹತ್ತಿರದಲ್ಲಿ ನಿಂತಿದೆ. ಗುಜರಾತ್ ಯುವ ಆಟಗಾರರು ನೀಡುತ್ತಿರುವ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ. ಅದ್ರಲ್ಲೂ ಈ ಬಾರಿ ಗುಜರಾತ್ ತಂಡದಲ್ಲಿರುವ ಆ ಇಬ್ಬರು ಆಟಗರರು ತಮ್ಮ ಸ್ಥಿರ ಪ್ರದರ್ಶನದ ಬಲದಿಂದ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಈ ಇಬ್ಬರೂ ಆಟಗಾರರು ಈಗಾಗಲೇ ಟೀಮ್ ಇಂಡಿಯಾ ಪರ ಆಡಿದ್ದು, ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಖಾಯಂಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ.
18ನೇ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ಅಮೋಘ ಪ್ರದರ್ಶನ ನೀಡುತ್ತಿದೆ. ಗುಜರಾತ್ ತಂಡವನ್ನು ಮುನ್ನಡೆಸುತ್ತಿರುವ ಶುಭಮನ್ ಗಿಲ್ ಸಹ ತಮ್ಮ ನಾಯಕತ್ವದ ಸ್ಕಿಲ್‌ಗಳಿಂದ ಮನೆ ಮಾತಾಗುತ್ತಿದ್ದಾರೆ. ಗುಜರಾತ್ ಆಡಿರುವ 8 ಪಂದ್ಯಗಳಲ್ಲಿ 6 ಜಯ ಸಾಧಿಸಿದ್ದು, 12 ಅಂಕಗಳನ್ನು ಕಲೆ ಹಾಕಿದೆ. ಟೈಟನ್ಸ್ ಈ ಪ್ರದರ್ಶನದ ಹಿಂದೆ, ಟಾಪ್ ಆರ್ಡರ್ ಬ್ಯಾಟರ್‌ಗಳು ಹಾಗೂ ಇಬ್ಬರು ಬೌಲರ್‌ಗಳು ತಮ್ಮದೇ ಆದ ಕಾಣಿಕೆ ನೀಡಿದ್ದಾರೆ.

ಗುಜರಾತ್ ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರ ದಂಡೇ ಇದೆ. ಈ ಪ್ಲೇಯರ್ಸ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡದ ಪರ ಅಬ್ಬರದ ಪ್ರದರ್ಶನ ನೀಡ್ತಾ ಇದ್ದಾರೆ. ಗುಜರಾತ್ ಗೆಲುವಿನ ಸಾರಥಿ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರತಿಭೆ, ಕನ್ನಡಿಗ ಪ್ರಸಿದ್ಧ ಕೃಷ್ಣ ಹಾಗೂ ಸಾಯಿ ಸುದರ್ಶನ್.
ಪ್ರಸಿದ್ಧ್ ಕೃಷ್ಣ ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯದಲ್ಲಿ ಕೊಂಚ ದುಬಾರಿ ಆದರು. ಆದರೆ ಕೋಚ್ ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. ಇನ್ನು ಎರಡನೇ ಪಂದ್ಯದಲ್ಲಂತೂ ಕಮಾಲ್ ಪ್ರದರ್ಶನ ನೀಡಿದರು. ದಾಖಲೆಯ ಐದು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಪ್ರಸಿದ್ಧ 4 ಓವರ್ ಬೌಲ್ ಮಾಡಿ 18 ರನ್ ನೀಡಿ 2 ವಿಕೆಟ್ ಕಬಳಿಸಿದರು. ಇವರ ಸ್ಥಿರ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿತು. ಇನ್ನು ತಾವು ಆಡಿದ ಬೆಳೆದ ಅಂಗಳದಲ್ಲೂ ಪ್ರಸಿದ್ಧ್, ಆರ್‌ಸಿಬಿ ವಿರುದ್ಧ ಬಿಗುವಿನ ದಾಳಿ ನಡೆಸಿದರು. ಆದರೆ ವಿಕೆಟ್ ಬೇಟೆ ನಡೆಸಲಿಲ್ಲ.
ಪ್ರಸಿದ್ಧ್ ಕೃಷ್ಣ ಈ ಆವೃತ್ತಿಯಲ್ಲಿ ಅಪ್‌ಡೇಟ್ ವರ್ಷನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಬೇಟೆ ನಡೆಸುತ್ತಾ ರನ್‌ಗಳಿಗೆ ಕಡಿವಾಣ ಹಾಕುತ್ತಾ ಗುಜರಾತ್ ಗೆಲುವಿಗೆ ಕಾರಣಿಕರ್ತರಾಗುತ್ತಿದ್ದಾರೆ. ಪ್ರಸಿದ್ಧ ಈ ಬಾರಿ ಆಡಿದ 8 ಪಂದ್ಯಗಳಲ್ಲಿ 7.29ರ ಎಕಾನಮಿಯಲ್ಲಿ 16 ವಿಕೆಟ್ ಪಡೆದು ಅಬ್ಬರಿಸುತ್ತಿದ್ದಾರೆ.
ಗುಜರಾತ್ ತಂಡದ ಗೆಲುವಿನಲ್ಲಿ ಮಿಂಚುತ್ತಿರುವ ಇನ್ನೊಬ್ಬ ಪ್ರತಿಭೆ 23 ವರ್ಷದ ಸಾಯಿ ಸುದರ್ಶನ್. ಗುಜರಾತ್ ಟಾಪ್ ಆರ್ಡರ್‌ಗೆ ಬಲ ನೀಡಿರುವ ಸುದರ್ಶನ್ ತಮ್ಮ ಕ್ಲಾಸಿಕ್ ಬ್ಯಾಟಿಂಗ್‌ನಿಂದಲೇ ರನ್‌ಗಳನ್ನು ಕಲೆ ಹಾಕುತ್ತ ಸಾಗುತ್ತಿದ್ದಾರೆ. ಇವರು ಆಡಿರುವ 8 ಪಂದ್ಯಗಳಲ್ಲಿ 5 ಅರ್ಧಶತಕ ಸೇರಿದಂತೆ 417 ರನ್ ಸಿಡಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ 152ಕ್ಕೂ ಹೆಚ್ಚು ಇದ್ದು ಈ ಪ್ಲೇಯರ್ ಟೈಟನ್ಸ್ ಜಯದಲ್ಲಿ ಮಿಂಚಿದ್ದಾರೆ.