
ಕನ್ನಡಿಗ, ಟೀಂ ಇಂಡಿಯಾ ಬೌಲರ್ ಪ್ರಸಿದ್ಧ ಕೃಷ್ಣ ಬೆನ್ನು ನೋವಿನ ಸೆಳೆತದಿಂದಾಗಿ ಮುಂಬರುವ ನ್ಯೂಜಿಲೆಂಡ್ ವಿರುದ್ಧ ಎ ಸರಣಿಯಿಂದ ಹೊರಬಿದ್ದಿದ್ದಾರೆ. ಪರಿಣಾಮ ಬೆಂಗಳೂರಿನ ಎನ್‌ಸಿಎ ಮೈದಾನದಲ್ಲಿ ಅವರು ಚೇತರಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಪ್ರಸಿದ್ದ ಕೃಷ್ಣಗೆ ಬೆನ್ನು ನೋವು ಶುರುವಾಗಿದ್ದು, ಸೆಪ್ಟೆಂಬರ್ 1ರಿಂದ ಪ್ರಾರಂಭಗೊಂಡ ನಾಲ್ಕು ದಿನಗಳ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.
ಕೃಷ್ಣ (26) ಅವರಿಗೆ ಬೆನ್ನು ಸೆಳೆತವಿದೆ ಮತ್ತು ಯಾವುದೇ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ಬಹಿರಂಗಪಡಿಸಿವೆ. ಪ್ರಸ್ತುತ ಆಟದ ಮುನ್ನಾದಿನದಂದು ಈ ವಿಚಾರ ಹೊರಬಿದ್ದಿದ್ದು, ಅನುಭವಿ ವೇಗಿ ಇಲ್ಲದೆ ಭಾರತ ಎ ತಂಡವನ್ನು ಮುನ್ನಡೆದಿದೆ.
ಪ್ರಿಯಾಂಕ್ ಪಾಂಚಾಲ್ ನೇತೃತ್ವದ ತಂಡವು ಮುಖೇಶ್ ಕುಮಾರ್, ಯಶ್ ದಯಾಲ್, ಅರ್ಜಾನ್ ನಾಗವಾಸ್ವಾಲ್ಲಾ ಮತ್ತು ಕುಲದೀಪ್ ಯಾದವ್ ಎಂಬ ನಾಲ್ವರು ಬೌಲರ್‌ಗಳನ್ನು ಒಳಗೊಂಡಿತ್ತು. ಪಾರ್ಟ್‌ಟೈಮರ್ ತಿಲಕ್ ವರ್ಮಾ ಕೂಡ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದು, ಮೊದಲ ದಿನ ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ ಎ ತಂಡ 61 ಓವರ್‌ಗಳಲ್ಲಿ 5 ವಿಕೆಟ್‌ಗೆ 156 ರನ್ ಗಳಿಸಿದೆ.
ಈ ಪಂದ್ಯದ ಬಳಿಕ ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದು, ಸೆಪ್ಟೆಂಬರ್ 8 ರಂದು ಮತ್ತು ಸೆಪ್ಟೆಂಬರ್ 15 ರಂದು ನಾಲ್ಕು ದಿನಗಳ ಪಂದ್ಯ ನಡೆಯಲಿದೆ. ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಭಾರತ ಎ ತಂಡವು ಪ್ರಸಿದ್ಧ ಕೃಷ್ಣ ಬದಲಿಗೆ ಸದ್ಯದಲ್ಲೇ ಬದಲಿ ಆಟಗಾರರನ್ನ ಘೋಷಿಸಬಹುದು.
ನಾಲ್ಕು ದಿನಗಳ ಮೂರು ಪಂದ್ಯಗಳನ್ನಷ್ಟೇ ಅಲ್ಲದೆ ನ್ಯೂಜಿಲೆಂಡ್ ಎ ತಂಡವು ಮೂರು ಏಕದಿನ ಪಂದ್ಯಗಳನ್ನ ಸಹ ಆಡಲಿದೆ. ಎಲ್ಲಾ ಪಂದ್ಯಗಳು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 22, 25 ಮತ್ತು 27ರಂದು ನಡೆಯಲಿದೆ.