ಲಕ್ನೋ: ಭರವಸೆಯ ಕರ್ನಾಟಕದ ಬೌಲರ್ ಪ್ರಸಿದ್ಧ್ ಕೃಷ್ಣಾ ಅವರ ಮಾರಕ ದಾಳಿಯ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ 19ನೇ ಆವೃತ್ತಿ ಐಪಿಎಲ್‌ನ 19ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಜಯದ ಬಲದಿಂದ ಗುಜರಾತ್ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲುಗಳಿಂದ 4 ಅಂಕಗಳನ್ನು ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಲ್‌ಎಸ್‌ಜಿ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ಏಡನ್ ಮಾರ್ಕ್ರಾಮ್ ಹಾಗೂ ಮಿಚೆಲ್ ಮಾರ್ಷ್ ಜೋಡಿ ಮೊದಲ ವಿಕೆಟ್‌ಗೆ 14 ರನ್ ಸೇರಿಸಿತು. ಈ ಹಂತದಲ್ಲಿ ಮಿಚೆಲ್ ಮಾರ್ಷ್ 11 ರನ್ ಬಾರಿಸಿ ಔಟ್ ಆದರು. ನಾಯಕ ರಿಷಭ್ ಪಂತ್ (18) ರನ್ ಕಲೆ ಹಾಕುವಲ್ಲಿ ವಿಫಲರಾದರು. ಭರವಸೆಯ ಬ್ಯಾಟರ್ ಆಯುಷ್ ಬದೋನಿ (9) ರನ್ ಕಲೆ ಹಾಕಲಿಲ್ಲ.

ಆರಂಭಿಕ ಆಟಗಾರ ಏಡನ್ ಮಾರ್ಕ್ರಾಮ್ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 30 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ನಿಕೋಲಸ್ ಪೂರನ್ 19, ಅಬ್ದುಲ್ ಸಮದ್ 18, ಮುಕುಲ್ ಚೌದರಿ 18, ಜಾರ್ಜ್ ಲಿಂಡೆ 16 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಎಲ್‌ಎಸ್‌ಜಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 164 ರನ್ ಸೇರಿಸಿತು.
ಕನ್ನಡಿಗ ಪ್ರಸಿದ್ಧ್ ಕೃಷ್ಣ ಅಮೋಘ ಬೌಲಿಂಗ್ ದಾಳಿ ನಡೆಸಿದರು. ಇವರು 4 ಓವರ್‌ಗಳಲ್ಲಿ 28 ರನ್ ನೀಡಿ 4 ವಿಕೆಟ್ ಕಬಳಿಸಿದರು. ಯುವ ವೇಗದ ಬೌಲರ್ ಅಶೋಕ್ ಶರ್ಮಾ 2 ವಿಕೆಟ್ ಉರುಳಿಸಿದರು.

ಗುಜರಾತ್ ಟೈಟಾನ್ಸ್ ತಂಡದ ಆರಂಭ ಉತ್ತಮವಾಗಿತ್ತು. ಸಾಯಿ ಸುದರ್ಶನ್, ಶುಭಮನ್ ಗಿಲ್ ಜೋಡಿ ಮೊದಲ ವಿಕೆಟ್‌ಗೆ 5.1 ಓವರ್‌ಗಳಲ್ಲಿ 45 ರನ್ ಸಿಡಿಸಿತು. ಈ ಹಂತದಲ್ಲಿ ಸಾಯಿ ಸುದರ್ಶನ್ 15 ರನ್ ಬಾರಿಸಿದ್ದಾಗ ದಿಗ್ವೇಶ್ ರಾಠಿ ಅವರ ಎಸೆತದಲ್ಲಿ ಆವೇಶ್ ಖಾನ್‌ಗೆ ಕ್ಯಾಚ್ ನೀಡಿದರು.
ಗಿಲ್, ಬಟ್ಲರ್ ಅರ್ಧಶತಕದ ಸೊಬಗು
ಎರಡನೇ ವಿಕೆಟ್‌ಗೆ ಶುಭಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಜೋಡಿ ಸಹ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಎಲ್‌ಎಸ್‌ಜಿ ಬೌಲರ್‌ಗಳು ವಿಫಲರಾದರು. ಈ ಜೋಡಿ 58 ಎಸೆತಗಳಲ್ಲಿ 84 ರನ್ ಸೇರಿಸಿತು. ನಾಯಕ ಶುಭಮನ್ ಗಿಲ್ 40 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 56 ರನ್ ಬಾರಿಸಿದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಜೋಸ್ ಬಟ್ಲರ್ 37 ಎಸೆತಗಳಲ್ಲಿ 60 ರನ್ ಸೇರಿಸಿದರು. ವಾಷಿಂಗ್ಟನ್ ಸುಂದರ್ ಅಜೇಯ 21, ರಾಹುಲ್ ತೆವಾಟಿಯಾ ಅಜೇಯ 10 ರನ್ ಸಿಡಿಸಿ ಜಯದಲ್ಲಿ ಮಿಂಚಿದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ 3 ವಿಕೆಟ್‌ಗೆ 165 ರನ್ ಸೇರಿಸಿ ಜಯ ಸಾಧಿಸಿತು.