
ನವದೆಹಲಿ, ಅಕ್ಟೋಬರ್ 17 : ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಹಲವು ದಾಖಲೆಗಳನ್ನು ಮುರಿದ ಯುವ ಆಟಗಾರ ಪೃಥ್ವಿ ಶಾ ಅವರು ಟೀಂ ಇಂಡಿಯಾ ಪರ ಚೊಚ್ಚಲ ಏಕದಿನ ಪಂದ್ಯವಾಡುವ ಕಾಲ ಸನ್ನಿಹಿತವಾಗಿದೆ. ರೋಹಿತ್ ಶರ್ಮ ಜತೆಯಲ್ಲಿ ಪೃಥ್ವಿ ಶಾ ಅವರು ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲೆರಡು ಪಂದ್ಯಕ್ಕೆ ಈಗಾಗಲೇ ತಂಡವನ್ನು ಆಯ್ಕೆ ಮಾಡಲಾಗಿದೆ. ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ಅವರು ಆರಂಭಿಕ ಆಟಗಾರರಾಗಿ ಆಯ್ಕೆಯಾಗಿದ್ದಾರೆ. ಅಗತ್ಯ ಬಿದ್ದರೆ ಕೆಎಲ್ ರಾಹುಲ್ ಅವರನ್ನು ಆರಂಭಿಕರಾಗಿ ಬಳಸಬಹುದು.
ಆದರೆ, ಇಂಡಿಯನ್ ಎಕ್ಸ್ ಪ್ರೆಸ್ ವರದಿಯಂತೆ ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪೃಥ್ವಿ ಶಾ ಆಯ್ಕೆಯಾಗುವುದು ಖಚಿತವಾಗಿದ್ದು, ಮುಂಬೈನ ಇಬ್ಬರು ಆಟಗಾರರು ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ವಿಶ್ವಕಪ್ ದೃಷ್ಟಿಯಿಂದ ಬೇರೆ ಬೇರೆ ಆರಂಭಿಕ ಜೋಡಿಯನ್ನು ಕಣಕ್ಕಿಳಿಸಿ ಪರೀಕ್ಷಿಸಲು ಬಿಸಿಸಿಐ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಕೆಎಲ್ ರಾಹುಲ್ ಅವರನ್ನು ಆರಂಭಿಕರಾಗಿ ಆಡುವಂತೆ ಸೂಚಿಸುವ ಸಾಧ್ಯತೆಗಳಿವೆ.
ಜಸ್ ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ ಅವರು ಇದೇ ಕಾರಣಕ್ಕೆ ಎಲ್ಲಾ ಸರಣಿಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಉಳಿದ ಪ್ರತಿಭೆಗಳಿಗೆ ಅವಕಾಶ ನೀಡಲಾಗಿತ್ತು.
ಹೀಗಾಗಿ, ಕುಟುಂಬದ ಜತೆ ಕಾಲ ಕಳೆಯಲು ಬಯಸುವ ಹಾಗೂ ಸದ್ಯ ಉತ್ತಮ ಲಯದಲ್ಲಿರುವ ಶಿಖರ್ ಧವನ್ ಅವರಿಗೆ ವಿಶ್ರಾಂತಿ ನೀಡಿ, ಪೃಥ್ವಿ ಶಾ ಸೇರಿದಂತೆ ಹಲವು ಹೊಸ ಮುಖಗಳಿಗೆ ಅವಕಾಶ ಸಿಗಬಹುದು ಎಂಬ ಸುದ್ದಿಯಿದೆ.