
ಪಾಕಿಸ್ತಾನ ಸೂಪರ್ ಲೀಗ್ ಪಂದ್ಯದಲ್ಲಿ ಜೇಸನ್ ರಾಯ್ ದಾಖಲೆಯ ಶತಕ ಸಿಡಿಸಿ ಮಿಂಚಿದ್ದಾರೆ. 44 ಎಸೆತಗಳಲ್ಲಿ ಅಮೋಘ ಶತಕ ಬಾರಿಸಿದ ಜೇಸನ್ ರಾಯ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಗೆಲುವಿಗೆ ಕಾರಣವಾಗಿದ್ದಾರೆ.
ಪೇಶಾವರ್ ಝಲ್ಮಿ ನೀಡಿದ 240 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ 18.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪುವ ಮೂಲಕ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಪೇಶಾವರ್ ಝಲ್ಮಿ ಅತ್ಯುತ್ತಮ ಬ್ಯಾಟಿಂಗ್ ಮಾಡಿತು. ನಾಯಕ ಬಾಬರ್ ಅಜಂ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಚೊಚ್ಚಲ ಶತಕ ಸಿಡಿಸುವ ಮೂಲಕ ಮಿಂಚಿದರು. 65 ಎಸೆತಗಳಲ್ಲಿ 15 ಬೌಂಡರಿ ಮೂರು ಸಿಕ್ಸರ್ ನೆರವಿನಿಂದ 115 ರನ್ ಗಳಿಸಿದರು.
13.3 ಓವರ್ ಗಳಲ್ಲಿ ಬಾಬರ್ ಅಜಂ ಮತ್ತು ಸೈಯಮ್ ಅಯೂಬ್ ಜೋಡಿ 162 ರನ್‌ಗಳನ್ನು ಕಲೆ ಹಾಕಿದರು. ಸೈಯಮ್ ಅಯೂಬ್ 34 ಎಸೆತಗಳಲ್ಲಿ 6 ಬೌಂಡರಿ 5 ಸಿಕ್ಸರ್ ಸಹಿತ 74 ರನ್ ಸಿಡಿಸಿ ಮಿಂಚಿದರು. ರೋವಮ್ ಪೋವೆಲ್ 18 ಎಸೆತಗಳಲ್ಲಿ 35 ರನ್ ಗಳಿಸಿದರು. ಅಂತಿಮವಾಗಿ ಪೇಶಾವರ್ ಝಲ್ಮಿ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 240 ರನ್ ಕಲೆಹಾಕಿತು.

ಅತ್ಯುತ್ತಮ ಆರಂಭ ಪಡೆದ ಕ್ವೆಟ್ಟಾ ಗ್ಲಾಡಿಯೇಟರ್ಸ್
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಕ್ಕೆ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಜೇಸನ್ ರಾಯ್ ಆಸರೆಯಾದರು. ಮಾರ್ಟಿನ್ ಗಪ್ಟಿಲ್ ಮತ್ತು ರಾಯ್ ಸ್ಫೋಟಕ ಆರಂಭ ಒದಗಿಸಿದರು. 2.5 ಓವರ್ ಗಳಲ್ಲಿ 41 ರನ್ ಕಲೆಹಾಕಿದರು. ಗಪ್ಟಿಲ್ 8 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು.
ನಂತರ ಬಂದ ವಿಲ್ ಸಮೀದ್ ಜೇಸನ್ ರಾಯ್‌ಗೆ ಉತ್ತಮ ಸಾಥ್ ನೀಡಿದರು. 22 ಎಸೆತಗಳಲ್ಲಿ 26 ರನ್ ಗಳಿಸಿ ಔಟಾದರು. ಮೊಹಮ್ಮದ್ ಹಫೀಜ್ ಮತ್ತು ರಾಯ್ ಅಂತಿವಾಗಿ ಆರ್ಭಟಿಸಿದರು. ಹಫೀಜ್ 18 ಎಸೆತಗಳಲ್ಲಿ 6 ಬೌಂಡರಿ 2 ಸಿಕ್ಸರ್ ನೆರವಿನಿಂದ 41 ರನ್ ಗಳಿಸಿದರು.

ಜೇಸನ್ ರಾಯ್ ಅಬ್ಬರಕ್ಕೆ ಪೇಶಾವರ್ ಝಲ್ಮಿ ಧೂಳಿಪಟ
44 ಎಸೆತಗಳಲ್ಲಿ ಶತಕವನ್ನು ಪೂರೈಸಿದ ಜೇಸನ್ ರಾಯ್ ಕೊನೆಯವರೆಗೂ ಅಜೇಯರಾಗಿ ಉಳಿಯುವ ಮೂಲಕ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 63 ಎಸೆತಗಳಲ್ಲಿ 230.16 ಸ್ಟ್ರೈಕ್‌ರೇಟ್‌ನಲ್ಲಿ 20 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಸಹಿತ ಅಜೇಯ 145 ರನ್ ಗಳಿಸಿದರು.
ಹಫೀಜ್ ಮತ್ತು ರಾಯ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕ್ವೆಟ್ಟಾ ಗ್ಲಾಡಿಯೇಟರ್ಸ್ 18.2 ಓವರ್ ಗಳಲ್ಲಿಯೇ 2 ವಿಕೆಟ್ ಕಳೆದುಕೊಂಡು 243 ರನ್ ಗಳಿಸುವ ಮೂಲಕ 8 ವಿಕೆಟ್‌ಗಳ ಭಾರಿ ಜಯ ಸಾಧಿಸಿತು. ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಜೇಸನ್ ರಾಯ್‌ರನ್ನು ಐಪಿಎಲ್ ಮಿನಿ ಹರಾಜಿನಲ್ಲಿ ಯಾವುದೇ ತಂಡಗಳು ಖರೀದಿ ಮಾಡಲಿಲ್ಲ.