ಟಿ20 ವಿಶ್ವಕಪ್‌ನ "ಡಿ" ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತು. ಈ ವೇಳೆ ದಕ್ಷಿಣ ಆಫ್ರಿಕಾ ಪರ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಈ ಇನಿಂಗ್ಸ್ ಮೂಲಕ ಡಿಕಾಕ್ ಹಲವು ದಾಖಲೆಗಳನ್ನು ಅಳಿಸಿ ಹಾಕಿದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆಫ್ರಿಕಾ ತಂಡದ ನಾಯಕ ಐಡನ್ ಮಾರ್ಕ್ರಾಮ್ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಆರಂಭಿಕ ಕ್ವಿಂಟನ್ ಡಿಕಾಕ್ ಹಾಗೂ ರಯಾನ್ ರಿಕಲ್ಟನ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಸ್ಟಾರ್ ಆಟಗಾರರು ಬಿಗ್ ಹಿಟ್ ಮೂಲಕ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಈ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ 5 ಬೌಂಡರಿ, 3 ಸಿಕ್ಸರ್ ನೆರವಿನಿಂದ 59 ರನ್ ಬಾರಿಸಿದರು. ರಯಾನ್ ರಿಕಲ್ಟನ್ 61 ರನ್ ಗಳ ಇನಿಂಗ್ಸ್ ಕಟ್ಟಿ ತಂಡಕ್ಕೆ ನೆರವಾದರು. ಪರಿಣಾಮ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 187 ರನ್ ಕಲೆ ಹಾಕಿತು.ಡಿಕಾಕ್ ಈ ಇನಿಂಗ್ಸ್ ಮೂಲಕ ಹಲವು ದಾಖಲೆಗಳನ್ನು ಬರೆದರು.

ಡಿಕಾಕ್ ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ದಕ್ಷಿಣ ಆಫ್ರಿಕಾ ತಂಡದ ದಿಗ್ಗಜ ಬ್ಯಾಟರ್ ಎಬಿ ಡಿವಿಲಿಯರ್ಸ್ ಅವರ ದಾಖಲೆಯನ್ನು ಮೀರಿ ನಿಂತರು. ಕ್ವಿಂಟನ್ ಡಿ ಕಾಕ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಎಬಿಡಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು.
ಕ್ವಿಂಟನ್ ಡಿ ಕಾಕ್ - 737*
ಎಬಿ ಡಿವಿಲಿಯರ್ಸ್ - 717
ಜೆಪಿ ಡುಮಿನಿ - 568
ಡೇವಿಡ್ ಮಿಲ್ಲರ್ - 482
ಐಡೆನ್ ಮಾರ್ಕ್ರಾಮ್ - 448
ಅಫ್ಘಾನಿಸ್ತಾನ ವಿರುದ್ಧದ ಅರ್ಧಶತಕದ ಮೂಲಕ ಡಿಕಾಕ್ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ ಪಡೆದರು. ಇವರು ಈ ಅರ್ಧಶತಕದ ಮೂಲಕ ಎಬಿಡಿ ದಾಖಲೆಯ ಸಮಕ್ಕೆ ನಿಂತರು. ಈ ಇಬ್ಬರೂ ಸ್ಟಾರ್ ಆಟಗಾರರು ಚುಟುಕು ವಿಶ್ವಕಪ್‌ನಲ್ಲಿ ತಲಾ 5 ಅರ್ಧಶತಕ ಬಾರಿಸಿದ್ದಾರೆ.
ಕ್ವಿಂಟನ್ ಡಿ ಕಾಕ್ - 5 (29 ಇನ್ನಿಂಗ್ಸ್)
ಎಬಿ ಡಿವಿಲಿಯರ್ಸ್ - 5 (29 ಇನ್ನಿಂಗ್ಸ್)
ಐಡೆನ್ ಮಾರ್ಕ್ರಾಮ್ - 4 (20 ಇನ್ನಿಂಗ್ಸ್)