ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಟೀಮ್ ಇಂಡಿಯಾ ಯುವ ಆಟಗಾರರ ಪಡೆಯೊಂದಿಗೆ ಕಣಕ್ಕಿಳಿಯುತ್ತಿದೆ. ಈ ತಂಡದ ನಾಯಕತ್ವದ ಜವಾಬ್ಧಾರಿ ಚುಟುಕು ಮಾದರಿಯ ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಹೆಗಲಿಗೆ ಬಿದ್ದಿದೆ. ನವೆಂಬರ್ 23ರಿಂದ ಈ ಸರಣಿ ಆರಂಭವಾಗಲಿದ್ದು ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಮತ್ತೊಮ್ಮೆ ಮುಖಾಮುಖೀಯಾಗಲು ಸಜ್ಜಾಗಿದೆ.
ಈ ಬಾರಿಯ ವಿರ್ಶವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶ ಪಡೆದ ಭಾರತ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಭಾಗವಾಗಿದ್ದರು. ಈ ಟೂರ್ನಿಯಲ್ಲಿ ಭಾರತ ತಮಡ ಫೈನಲ್ ಹಂತದಲ್ಲಿ ಸೋಲು ಅನುಭವಿಸಿತು. ಆದರೆ ಇದೀಗ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಮೇಲೆ ಭಾರತದ ಚಿತ್ತ ನೆಟ್ಟಿದ್ದು ಅದಕ್ಕಾಗಿ ತಂಡವನ್ನು ಸಜ್ಜುಗೊಳಿಸುವ ದೃಷ್ಟಿಯಿಂದ ಈ ಐದು ಪಂದ್ಯಗಳ ಟಿ20 ಸರಣಿ ಮಹತ್ವದ್ದಾಗಿದೆ.

ಅಂದಹಾಗೆ ಈ ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಬೇಕಾಗಿತ್ತು. ಆದರೆ ಹಾರ್ದಿಕ್ ವಿರ್ಶವಕಪ್‌ನಲ್ಲಿ ಗಾಯಕ್ಕೆ ತುತ್ತಾಗಿರುವ ಕಾರಣ ಚೇತರಿಕೆಗೆ ಇನ್ನಚ್ಟು ಕಾಲಾವಕಾಶ ಬೇಕಾಗಿದೆ. ಈ ಕಾರಣದಿಂದಾಗಿ ಭಾರತ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಸೂರ್ಯಕುಮಾರ್‌ಗೆ ಒದಗಿಬಂದಿದೆ.
ಸೂರ್ಯಕುಮಾರ್ ಯಾದವ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ನಾಯಕನನ್ನಾಗಿ ನೇಮಕ ಮಾಡಿದ ಬಳಿಕ ಅನುಭವಿ ಆಟಗಾರ ಆರ್ ಅಶ್ವಿನ್ ಅಭಿನಂದನೆ ಸಲ್ಲಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯಲ್ಲಿ ಸೂರ್ಯಕುಮಾರ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. "ಅಭಿನಂದನೆಗಳು ಸೂರ್ಯಕುಮಾರ್ ಯಾದವ್. ಮುನ್ನುಗ್ಗು ಗೆಳೆಯ" ಎಂದು ಬರೆದುಕೊಂಡಿದ್ದಾರೆ. ಅದರ ಜೊತೆಗೆ "ದೇಶವನ್ನು ಮುನ್ನಡೆಸುವುದು ದೊಡ್ಡ ಗೌರವ" ಎಂದು ಕೂಡ ಬರೆದುಕೊಂಡಿದ್ದಾರೆ.
ಇನ್ನು ಟಿ20 ವಿಶ್ವಕಪ್ ಕೇವಲ ಆರು ತಿಂಗಳಿನಲ್ಲಿ ಆಯೋಜನೆಯಾಗಲಿದ್ದು ವೆಸ್ಟ್ ಇಂಡೀಸ್ ಹಾಗೂ ಯುಎಸ್‌ಎ ಆತಿಥ್ಯದಲ್ಲಿ ಈ ಟೂರ್ನಿ ನಡೆಯಲಿದೆ. ಈ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಸೂರ್ಯಕುಮಾರ್ ಯಾದವ್ ಬಹಳ ದೊಡ್ಡ ಪಾತ್ರವನ್ನು ನಿರ್ವಹಿಸಲಿದ್ದಾರೆ. ಏಕದಿನ ವಿಶ್ವಕಪ್ ಸೋಲಿನ ಆಘಾತಕ್ಕೆ ಒಳಗಾಗಿರುವ ಭಾರತ ತಂಡ ಆ ಸೋಲಿನ ಕರಿಛಾಯೆಯಿಂದ ಹೊರಬಂದು ಮುಂದೆ ಇರುವ ದೊಡ್ಡ ಗುರಿಯತ್ತ ಹೆಜ್ಜೆಯಿಡಬೇಕಿದೆ.
ಆಸ್ಟ್ರೇಲಿಯಾ ಟಿ20 ಸರಣಿಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್ , ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್. (ಶ್ರೇಯಸ್ ಅಯ್ಯರ್ ಉಪನಾಯಕನಾಗಿ ಅಂತಿಮ ಎರಡು T20 ಪಂದ್ಯಗಳಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ).