
ಬೆಂಗಳೂರು, ಏಪ್ರಿಲ್ 25: ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಬುಧವಾರದ (ಏಪ್ರಿಲ್ 25) ಮುಖಾಮುಖಿಯಲ್ಲಿ ಆರ್‌ಸಿಬಿ 17 ರನ್ ಜಯ ಸಾಧಿಸಿತ್ತು. ಆದರೆ ಪಂದ್ಯ ರೋಚಕ ಹಂತದಲ್ಲಿದ್ದಾಗ ಅಶ್ವಿನ್ ಔಟ್ ಆದರು. ಆಗ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಕೈ ಸನ್ನೆ ಮೂಲಕ ಕೊಂಚ ಭಿನ್ನವಾಗಿ ಸಂಭ್ರಮಿಸಿದ್ದರು. ಈ ವಿಚಾರವಾಗಿ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಪಂಜಾಬ್ ಇನ್ನಿಂಗ್ಸ್ ವೇಳೆ ಉಮೇಶ್ ಯಾದವ್ ಅವರ ಅಂತಿಮ ಓವರ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವಿಗೆ 27 ರನ್ ಬೇಕಿತ್ತು. ಕೆXIಪಿ ನಾಯಕ ಆರ್ ಅಶ್ವಿನ್ ಮೊದಲ ಎಸೆತಕ್ಕೆ ಸಿಕ್ಸ್ ಬಾರಿಸಿದ್ದರು. ನಂತರದ ಎಸೆತಕ್ಕೂ ಸಿಕ್ಸ್ ಬಾರಿಸಲು ಯತ್ನಿಸಿದರಾದರೂ ಲಾಂಗ್ ಆನ್‌ನಲ್ಲಿದ್ದ ಕೊಹ್ಲಿ ಅದನ್ನು ಕ್ಯಾಚ್ ಮಾಡಿದವರೇ 'ಎಷ್ಟೂಂತ ಸಿಕ್ಸ್ ಬಾರಿಸ್ತೀಯ' ಅನ್ನೋ ಹಾಗೆ ಕೈಸನ್ನೆ ಮಾಡಿ ಅಶ್ವಿನ್‌ಗೆ ಪೆವಿಲಿಯನ್‌ನ ದಾರಿ ತೋರಿಸಿದ್ದರು.
ಕೊಹ್ಲಿ ವರ್ತನೆಗೆ ತಕ್ಕಂತೆ ಅಶ್ವಿನ್ ಕೂಡ ಆ ಕ್ಷಣ ಸಿಡುಕು ಪ್ರದರ್ಶಿಸಿದ್ದರು. ಈ ಬಗ್ಗೆ ಪಂದ್ಯದ ಬಳಿಕ ಮಾತನಾಡುತ್ತ ಅಶ್ವಿನ್ 'ನಾನು ನನ್ನದೇ ಶೈಲಿಯಲ್ಲಿ ಆಡಿದೆ, ಪ್ರತಿಕ್ರಿಯಿಸಿದೆ; ಕೊಹ್ಲಿಯೂ ಇದನ್ನೇ ಮಾಡಿದರು. ಅಷ್ಟೆ, ಆಟದಲ್ಲಿ ಇದು ಸಾಮಾನ್ಯ' ಎಂದಿದ್ದಾರೆ.
ಮಾತು ಮುಂದುವರೆಸಿದ ಅಶ್ವಿನ್, 'ರೋಚಕ ಪಂದ್ಯವನ್ನು ಜಯದ ಫಲಿತಾಂಶದೆಡೆಗೆ ತಿರುಗಿಸಿಕೊಳ್ಳುವಲ್ಲಿ ತಂಡ ಎಡವಿತು. ಅಂತಿಮ 3 ಓವರ್‌ಗಳಲ್ಲಿ ಸುಮಾರು 60 ರನ್‌ಗಳನ್ನು ಪೂರೈಸೋದು ಕಷ್ಟ. ಆದರೂ ನಾವು ಗುರಿ ತಲುಪುವ ಸಾಧ್ಯತೆಯನ್ನು ತೋರಿಸಿದ್ದೆವು. ಆದರೆ ಅಂತಿಮ ಕ್ಷಣದಲ್ಲಿ ಕೈಚೆಲ್ಲಿದೆವು' ಎಂದರು.