ಚೆನ್ನೈ: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಚೆನ್ನೈನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನಿಡಿದ್ದಾರೆ. ಒತ್ತಡದಲ್ಲಿ ತಂಡಕ್ಕೆ ತಮ್ಮ ಬ್ಯಾಟಿಂಗ್‌ನಿಂದ ಆಧಾರವಾಗಿದ್ದಾರೆ. ಎಂಎ ಚಿದಂಬರಂ ಅಂಗಳದಲ್ಲಿ ಕ್ಲಾಸಿಕ್ ಆಟವಾಡಿದ ಅಶ್ವಿನ್ ಶತಕ ಬಾರಿಸಿ ಅಬ್ಬರಿಸಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳು ಪೆವಿಲಿಯನ್ ಪರೆಡ್ ನಡೆಸಿದಾಗ, ನೆಲಕಚ್ಚಿ ನಿಂತು ಬ್ಯಾಟ್ ಮಾಡಿದ ಅಶ್ವಿನ್ ತಂಡಕ್ಕೆ ಆಸರೆಯಾದರು. ಅಲ್ಲದೆ ತಮ್ಮ ಟೆಸ್ಟ್ ವೃತ್ತಿ ಜೀವನದ ಆರನೇ ಶತಕ ಬಾರಿಸಿ ಅಬ್ಬರಿಸಿದರು. ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಮುರಳೀಧರನ್ ಅವರ ವಿಶ್ವ ದಾಖಲೆಗೆ ಅಪಾಯ ಶುರುವಾಗಿದೆ. ಮುರಳೀಧರನ್ ಅವರ ಯಾವ ದಾಖಲೆಗೆ ಅಪಾಯ ಕಾದಿದೆ ಎಂಬ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾ 6 ವಿಕೆಟ್‌ಗಳು ಕೇವಲ 144 ರನ್‌ಗಳೊಂದಿಗೆ ಸಂಕಷ್ಟದಲ್ಲಿದ್ದಾಗ ಅಶ್ವಿನ್, ಜಡೇಜಾ ಜೋಡಿ ಆಧಾರವಾದರು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅಶ್ವಿನ್ ಜಡೇಜಾ ಅವರೊಂದಿಗೆ 199 ರನ್‌ಗಳ ಜೊತೆಯಾಟವನ್ನು ನೀಡಿದರು. ಪರಿಣಾಮ ಭಾರತ 376 ರನ್ ಕಲೆ ಹಾಕುವಲ್ಲಿ ಶ್ರಮಿಸಿದರು. ಅಶ್ವಿನ್ 12 ಬೌಂಡರಿ, 2 ಸಿಕ್ಸರ್ ಸೇರಿದಂತೆ 113 ರನ್‌ಗಳ ಇನಿಂಗ್ಸ್ ತಂಡವನ್ನು ಅಪಾಯದಿಂದ ಪಾರು ಮಾಡಿತು.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದ ದಾಖಲೆ ಶ್ರೀಲಂಕಾ ದಿಗ್ಗಜ ಆಟಗಾರ ಮುತ್ತಯ್ಯ ಮುರಳೀಧರನ್ ಅವರಿಗಿದೆ. ಈ ದಾಖಲೆ ಅಪಾಯದಲ್ಲಿದೆ. ಭಾರತದ ಸ್ಪಿನ್ ಬೌಲರ್ ಈ ದಾಖಲೆಯ ಸನಿಹಕ್ಕೆ ಬಂದು ನಿಂತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ 10 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಪ್ರಸಕ್ತ ಭಾರತ-ಬಾಂಗ್ಲಾದೇಶ ಸರಣಿಯಲ್ಲಿ ಈ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಮೊದಲ ಪಂದ್ಯದಲ್ಲಿ ಅಶ್ವಿನ್ ಭರ್ಜರಿ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾಗಿದ್ದರು. ಇನ್ನು ಉಳಿದಂತೆ ಬೌಲಿಂಗ್‌ನಲ್ಲಿ ಮಿಂಚು ಹರಿಸಿದರೆ, ಇವರ ಮುಡಿಗೆ ಮತ್ತೊಮ್ಮೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಬಹುದು. ಈ ಮೂಲಕ ಅವರು ಶ್ರೀಲಂಕಾ ದಿಗ್ಗಜ ಮುರಳೀಧರನ್ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಅಶ್ವಿನ್ ಈಗಾಗಲೇ ವಿಶ್ವ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇವರು ವಿಶ್ವದ ಅಗ್ರ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅಶ್ವಿನ್ 100 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 516 ವಿಕೆಟ್ ಪಡೆದಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲೂ ಅಶ್ವಿನ್ ಸ್ಥಿರ ಪ್ರದರ್ಶನ ಮುಂದುವರೆಸಿದ್ದಾರೆ. ಇವರು ಆರು ಶತಕ ಹಾಗೂ 14 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅಶ್ವಿನ್ ಬಾಂಗ್ಲಾ ಬ್ಯಾಟರ್‌ಗಳನ್ನು ಕಾಡಬೇಕಿದೆ. ಅಲ್ಲದೆ ಎರಡನೇ ಇನಿಂಗ್ಸ್‌ನಲ್ಲೂ ವಿಕೆಟ್ ಬೇಟೆ ನಡೆಸಬೇಕು. ಕಾನ್ಪುರದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲೂ ಸ್ಥಿರ ಪ್ರದರ್ಶನವನ್ನು ಮುಂದುವರೆಸಿದರೆ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಬಹುದು.