
ನವದೆಹಲಿ: ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ತನಗೆ ಅನಿಸಿದ್ದನ್ನು ಹಾಗೇ ತೋರಿಕೊಳ್ಳುವ ಸ್ವಭಾವದವರು. ಗಂಭೀರ ಮತ್ತು ತಮಾಷೆ ಎರಡೂ ಸ್ವಭಾವಗಳು ಅಶ್ವಿನ್ ಅವರಲ್ಲಿದೆ. ಇತ್ತೀಚೆಗೆ ಅಶ್ವಿನ್ ಸಾಮಾಜಿಕ ಜಾಲತಾಣದಲ್ಲಿ ಭಾರತದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಕಾಲೆಳೆದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20ಐಯೊಂದಿಗೆ ಇತ್ತೀಚೆಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಸೂರ್ಯಕುಮಾರ್ ಅಶ್ವಿನ್ ಅವರನ್ನು ಟ್ವಿಟರ್ ನಲ್ಲಿ ಫಾಲೋ ಮಾಡಿದ್ದರು. ಇದು ಅಶ್ವಿನ್‌ಗೆ ತಮಾಷೆಯಾಗಿ ಕಾಣಿಸಿದೆ. ಹೀಗಾಗಿ ಟ್ವಿಟರ್ ನೋಟಿಫಿಕೇಶನ್‌ನ ಸ್ಕ್ರೀನ್‌ಶಾಟ್ ತೆಗೆದಿರುವ ಅಶ್ವಿನ್ ಅದನ್ನು ತನ್ನ ಟ್ವಿಟರ್ ಅಕೌಂಟ್‌ನಲ್ಲಿ ಹಾಕಿಕೊಂಡಿದ್ದಾರೆ.
ಟ್ವಿಟರ್ ನಲ್ಲಿ ಸೂರ್ಯಕುಮಾರ್ ಯಾದವ್ ತನ್ನನ್ನು ಫಾಲೋ ಮಾಡುತ್ತಿರುವ ನೋಟಿಫಿಕೇಶನ್‌ನ ಸ್ಕ್ರೀನ್‌ಶಾಟ್ ಹಾಕಿರುವ ಅಶ್ವಿನ್, 'ಸ್ಕೈ ಇಸ್ ದ ಲಿಮಿಟ್ ಎಂದು ಬರೆದುಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಅವರನ್ನು ಅಭಿಮಾನಿಗಳು ಶಾರ್ಟ್ ಆಗಿ ಸ್ಕೈ ಅಂತ ಕರೆಯುವುದರಿಂದ ಅಶ್ವಿನ್ ಕೂಡ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಲಿರುವ ಭಾರತೀಯ ತಂಡದಲ್ಲಿ ಅಶ್ವಿನ್ ಕೂಡ ಇದ್ದಾರೆ. ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಶ್ವಿನ್ ಅತ್ಯಧಿಕ ವಿಕೆಟ್ ಪಡೆದವರಾಗಿ ದಾಖಲೆ ನಿರ್ಮಿಸುವ ಸಾದ್ಯತೆಯಿದೆ.