ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ರಜತ್ ಪಾಟಿದಾರ್ ಗಾಯದ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿಯುವುದು ಖಚಿತವಾಗಿದೆ. ಕಳೆದ ಬಾರಿಯ ಐಪಿಎಲ್‌ನಲ್ಲಿ ಬದಲಿ ಆಟಗಾರನಾಗಿ ಆರ್‌ಸಿಬಿ ತಂಡವನ್ನು ಸೇರಿಕೊಂಡರು ಬಳಿಕ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದ ರಜತ್ ಪಾಡಿದಾರ್ ತಂಡದ ಯಶಸ್ಸಿಗೆ ಪ್ರಮುಖ ಕೊಡುಗೆ ನೀಡಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಪಾಟಿದಾರ್ ಪ್ರಮುಖ ಭರವಸೆಯಾಗಿದ್ದರು. ಆದರೆ ಗಾಯದ ಕಾರಣದಿಂದಾಗಿ ಈ ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿಯುವಂತಾಗಿದೆ.
ಇದೀಗ ರಜತ್ ಪಾಟಿದಾರ್ ಅಲಭ್ಯವಾಗುತ್ತಿರುವ ಕಾರಣದಿಂದಾಗಿ ಆರ್‌ಸಿಬಿ ತಂಡಕ್ಕೆ ಬದಲಿ ಆಟಗಾರ ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಸದ್ಯ ಆರ್‌ಸಿಬಿ ಪಾಟಿದಾರ್‌ಗೆ ಬದಲಿ ಆಟಗಾರನ್ನು ಹೆಸರಿಸಿಲ್ಲ. ಹೀಗಾಗಿ ಕರ್ನಾಟಕದ ಆಟಗಾರರಿಗೆ ಆರ್‌ಸಿಬಿ ತಂಡದಲ್ಲಿಅವಕಾಶ ದೊರೆಯಬಹುದಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಲು ಆರಂಭಿಸಿದೆ. ಈ ಬಾರಿಯ ತಂಡದಲ್ಲಿ ಆರ್‌ಸಿಬಿ ಕೇವಲ ಓರ್ವ ಕನ್ನಡಿಗ ಆಟಗಾರನನ್ನು ಮಾತ್ರವೇ ಹೊಂದಿದೆ. ಹೀಗಾಗಿ ಅರ್ಹತೆಯಿದ್ದರೂ ಕನ್ನಡಿಗರನ್ನು ಕಡೆಗಣಿಸುತ್ತಿರುವ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಈ ಸಂದರ್ಭದಲ್ಲಿ ಹರಾಜಿನಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಸಣ್ಣ ಅವಕಾಶ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮುಂದಿದೆ.

ಹಾಗಾದರೆ ಆರ್‌ಸಿಬಿ ತಂಡ ರಜತ್ ಪಾಟಿದಾರ್ ಬದಲಿಗೆ ಕನ್ನಡಿಗರನ್ನು ಆಯ್ಕೆ ಮಾಡುವುದಾದರೆ ಯಾವೆಲ್ಲಾ ಅವಕಾಶಗಳು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮುಂದಿದೆ. ಇಲ್ಲಿದೆ ಮಾಹಿತಿ ಮುಂದೆ ಓದಿ..
ಎಲ್‌ಆರ್ ಚೇತನ್
ಕರ್ನಾಟಕದ ಪ್ರತಿಭಾನ್ವಿತ ಆಟಗಾರ ಚೇತನ್ ಎನ್‌ಆರ್ ಕಳೆದ ಐಪಿಎಲ್ ಹರಾಜಿನಲ್ಲಿ ಹರಾಜಾಗದೆ ಉಳಿದ ಆಟಗಾರ. ಮೂಲಬೆಲೆ 20 ಲಕ್ಷ ಹೊಂದಿದ್ದ ಈ ಆಟಗಾರನನ್ನು ಯಾವುದೇ ಫ್ರಾಂಚೈಸಿ ತಂಡಕ್ಕೆ ಸೇರ್ಪಡೆಗೊಳಿಸಿರಲಿಲ್ಲ. ವೈಟ್‌ಬಾಲ್ ಮಾದರಿಯಲ್ಲಿ ಈಗಾಗಲೇ ಸಾಕಷ್ಟು ಭರವಸೆ ಮೂಡಿಸಿರುವ ಯುವ ಆಟಗಾರ ಎಲ್‌ಆರ್ ಚೇತನ್ ಮೂಲತಃ ಮೈಸೂರಿನವರು. ಕಳೆದ ವರ್ಷ ನಡೆದ. ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಚೇತನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಗಮನಸೆಳೆದಿದ್ದರು.
ಈ ಟೂರ್ನಿಯಲ್ಲಿ ಅವರು ಆಡಿದ 11 ಇನ್ನಿಂಗ್ಸ್‌ಗಳಲ್ಲಿ 447 ರನ್‌ಗಳನ್ನು ಬಾರಿಸಿದ್ದು 173.25ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು. ಈ ಮೂಲಕ ಟೂರ್ನಿಯ ಎರಡನೇ ಅತಿ ಹೆಚ್ಚಿನ ಸ್ಕೋರರ್ ಎನಿಸಿಕೊಂಡಿದ್ದರು. ಇಂಥಾ ಪ್ರತಿಭಾವಂತ ಆಟಗಾರನಿಗೆ ಮಣೆಹಾಕಲು ಆರ್‌ಸಿಬಿ ಮನಸ್ಸು ಮಾಡಲಿದೆಯಾ ಎಂಬುದು ಕುತೂಹಲ ಮೂಡಿಸಿದೆ.
ಜಗದೀಶ ಸುಚಿತ್
ಆರ್‌ಸಿಬಿ ರಜತ್ ಪಾಟಿದಾರ್ ಬದಲಿಗೆ ತಂಡಕ್ಕೆ ಸೇರ್ಪಡೆಗೊಳಿಸಬಹುದಾದ ಮತ್ತೋರ್ವ ಕನ್ನಡಿದ ಜಗದೀಶ ಸುಚಿತ್. ಅಂದಹಾಗೆ ರಜತ್ ಪಾಟಿದಾರ್ ಸಮಾನವಾಗಿ ಹೊಂದಿಕೆಯಾಗಬಲ್ಲ ಬದಲಿ ಆಟಗಾರ ಜಗದೀಶ ಸುಚಿತ್ ಅಲ್ಲ ಎಂಬುದು ನಿಜ. ಯಾಕೆಂದರೆ ರಜತ್ ಪಾಟಿದಾರ್ ಪೂರ್ಣ ಪ್ರಮಾಣದ ಬ್ಯಾಟರ್ ಆಗಿದ್ದರೆ ಜಗದೀಶ ಸುಚಿತ್ ಬೌಲಿಂಗ್ ಆಲ್‌ರೌಂಡರ್. ಆದರೆ ಆರ್‌ಸಿಬಿ ತಂಡದಲ್ಲಿ ಬದಲಾಢ್ಯ ಬ್ಯಾಟರ್‌ಗಳ ಪಡೆ ಇರುವ ಕಾರಣ ಜಗದೀಶ ಸುಚಿತ್ ಆಲ್‌ರೌಂಡರ್ ಆಗಿ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ಚಿನ್ನಸ್ವಾಮಿ ಕ್ರೀಡಾಂಣಗಣದಲ್ಲಿ ಆಡಿದ ಸಾಕಷ್ಟು ಅನುಭವ ಕೂಡ ಅವರಲ್ಲಿದೆ.
ಕರುಣ್ ನಾಯರ್
ಅನುಭವಿ ಆಟಗಾರ ಕರುಣ್ ನಾಯರ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಹರಾಜಾಗದೆ ಉಳಿದಿದ್ದರು. ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಆಡಿದ ಅಪಾರ ಅನುಭವ ಹೊಂದಿರುವ ಕರುಣ್ ನಾಯರ್ ಮೇಲೆ ಆರ್‌ಸಿಬಿ ಫ್ರಾಂಚೈಸಿ ಭರವಸೆಯಿಟ್ಟರೆ ಐಪಿಎಲ್‌ನಲ್ಲಿ ಕರ್ನಾಟಕದ ಆಟಗಾರನಿಗೆ ಮತ್ತೊಂದು ಅವಕಾಶ ದೊರೆತಂತಾಗುತ್ತದೆ. ಐಪಿಎಲ್‌ನಲ್ಲಿ 68 ಇನ್ನಿಂಗ್ಸ್‌ಗಳಲ್ಲಿ ಕರುಣ್ ಬ್ಯಾಟಿಂಗ್ ಮಾಡಿದ್ದು 1496 ರನ್‌ಗಳಿಸಿದ್ದಾರೆ. 10 ಅರ್ಧ ಶತಕ ಸಿಡಿಸಿದ್ದಾರೆ ಕರುಣ್.